ಸಂವಹನ ಮಾಧ್ಯಮಗಳ ನಿರ್ಲಕ್ಷ್ಯತನದಿಂದ ಕನ್ನಡ ಸಾರಸ್ವತ ಲೋಕ ಅನಾಥ: ಡಾ. ಸಿರನೂರಕರ್

ಕಲಬುರಗಿ,ಜು.13:ಸಂವಹನ ಮಾಧ್ಯಮಗಳ ನಿರ್ಲಕ್ಷ್ಯತನದಿಂದಾಗಿ ಕನ್ನಡ ಸಾರಸ್ವತ ಲೋಕ ಅನಾಥವಾಗಿದೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಚಿಂತಕ ಡಾ. ಶ್ರೀನಿವಾಸ್ ಸಿರನೂರಕರ್ ಅವರು ಹೇಳಿದರು.
ನಗರದ ಕನ್ನಡ ಭವನದಲ್ಲಿ ಪತ್ರಕರ್ತ ಸಾಹಿತಿಗಳ ಸಮಾವೇಶದಲ್ಲಿ ಮೊದಲ ಗೋಷ್ಠಿಯಲ್ಲಿ ಸಂವಹನ ಮಾಧ್ಯಮ ಮತ್ತು ಕನ್ನಡ ಅಭಿವೃದ್ಧಿ ಕುರಿತು ವಿಚಾರ ಮಂಡಿಸಿದ ಅವರು, ಪತ್ರಿಕೆಗಳು ಕನ್ನಡ ಪೋಷಣೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕೆಗಳು ಸಾಹಿತ್ಯಕ್ಕೆ ಪ್ರೇರಕವಾಗಿರಬೇಕು, ಸ್ಫೂರ್ತಿಯಾಗಿರಬೇಕು. ಕನ್ನಡ ಗ್ರಂಥಗಳ ಕುರಿತು ವಿಮರ್ಶೆ ಆಗಬೇಕು. ಪುಸ್ತಕಗಳ ಪರಿಚಯ ಆಗಬೇಕು. ಕವಿ, ಲೇಖಕರ ಮತ್ತು ಬರಹಗಾರರ ಕುರಿತು ಮಾಹಿತಿ ಒದಗಿಸಬೇಕು. ಅನುವಾದಿತ ಕೃತಿಗಳ ಕುರಿತು ಚರ್ಚೆ ಆಗಬೇಕು. ಅಂತಹ ಕೆಲಸ, ಕಾರ್ಯಗಳು ಇತ್ತೀಚಿನ ಸಂವಹನ ಮಾಧ್ಯಮಗಳಿಂದ ಆಗುತ್ತಿಲ್ಲ ಎಂದು ಅವರು ಬೇಸರ ಹೊರಹಾಕಿದರು.
ಈ ಮೊದಲು ಕನ್ನಡ ಸಾಹಿತ್ಯ ಸಂಸ್ಕøತಿ ಹಾಗೂ ಪರಂಪರೆಯ ಕುರಿತು ಕೇವಲ ಕನ್ನಡ ಸಂವಹನ ಮಾಧ್ಯಮಗಳು ಅಲ್ಲದೇ ಆಂಗ್ಲ ಸಂವಹನ ಮಾಧ್ಯಮಗಳೂ ಸಹ ಹೆಚ್ಚು ಒತ್ತು ಕೊಟ್ಟು ಬರೆಯುತ್ತಿದ್ದರು. ಪರಿಣಾಮ ಇಂಗ್ಲೀಷ್ ಮತ್ತು ಕನ್ನಡ ಪತ್ರಿಕೆಗಳಲ್ಲಿ ಸಾಹಿತ್ಯ, ಸಂಸ್ಕøತಿ, ಪರಂಪರೆ ಕುರಿತು ಆದ್ಯತೆ ನೀಡುತ್ತಿದ್ದುದರಿಂದ ಓದುಗರಿಗೆ ಹೆಚ್ಚು ಇಷ್ಟವಾಗುತ್ತಿದ್ದವು. ಅದರ ಪರಿಣಾಮ ಸಾಹಿತ್ಯಕ್ಕೆ ಪ್ರೇರಕವಾಗಿ ಹಾಗೂ ಪೂರಕವಾಗಿ ಸಂವಹನ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿದ್ದವು ಎಂದು ಅವರು ಹೇಳಿದರು.
ಕನ್ನಡದಲ್ಲಿ ಅನೇಕ ಮಹತ್ವದ ಗ್ರಂಥಗಳಿವೆ. ಮಿತಾಕ್ಷರ ಸಂಹಿತೆಯ ಕೃತಿಯ ಕುರಿತು ಯಾರೂ ವಿಮರ್ಶೆ ಮಾಡುತ್ತಿಲ್ಲ. ನಾನು ಬೆಂಗಳೂರಿನಲ್ಲಿ ಆಂಗ್ಲ ಪತ್ರಿಕೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಇಂತಹ ಕೃತಿಗಳಿಗೆ ಒತ್ತು ಕೊಟ್ಟಿದ್ದೆ. ಅದೂ ಇಂಗ್ಲೀಷ್ ಪತ್ರಿಕೆಯಲ್ಲಿ ಆ ಕುರಿತು ವರದಿಯಾಗೇಕಾಯಿತು. ಅಂತಹ ಕಾರ್ಯಗಳು ಕನ್ನಡ ಸಂವಹನ ಮಾಧ್ಯಮಗಳಲ್ಲಿ ಆಗಬೇಕು ಎಂದು ಅವರು ಬಯಸಿದರು.
12 ಮತ್ತು 13ನೇ ಶತಮಾನದಲ್ಲಿನ ರಾಘವಾಂಕನ ಹರಿಶ್ಚಂದ್ರ ಕಾವ್ಯದ ಕುರಿತು ವನಮಾಲಾ ವಸಂತ್ ಅವರು ಕನ್ನಡಕ್ಕೆ ಅನುವಾದಿಸಿದರು. ಅಂತಹ ಕೃತಿಗಳ ಕುರಿತು ಇಂಗ್ಲೀಷ್ ಪತ್ರಿಕೆಗಳಲ್ಲಿ ವಿಮರ್ಶೆಗಳು ಆದವು. ಆದಾಗ್ಯೂ, ಕನ್ನಡದಲ್ಲಿ ವಿಮರ್ಶೆ ಆಗಲಿಲ್ಲ. ಹಳೆಗನ್ನಡ, ನಡುಗನ್ನಡ, ಹೊಸಗನ್ನಡದಲ್ಲಿ ಅನೇಕ ಉತ್ತಮ ಕೃತಿಗಳಿವೆ. ಅಂತಹುಗಳಿಗೆ ಒತ್ತು ಕೊಟ್ಟು ವಿಮರ್ಶೆ, ಅನುವಾದ ಕಾರ್ಯಗಳು ನಡೆಯಬೇಕು. ಅಂದಾಗ ಕನ್ನಡದ ಅಭಿವೃದ್ಧಿಗೆ ಸಂವಹನ ಮಾಧ್ಯಮಗಳಿಂದ ಪ್ರೇರಕವಾಗಲಿದೆ ಎಂದು ಅವರು ಹೇಳಿದರು.
ಅನೇಕ ಮಹನೀಯರ ಜನ್ಮ ಶತಮಾನೋತ್ಸವಗಳು ಆಗಿವೆ. ಅವರ ಕುರಿತು ಕನ್ನಡದ ಸಂವಹನ ಮಾಧ್ಯಮಗಳು ನಿರ್ಲಕ್ಷಿಸಿದವು. ವಿಶ್ವದ ಖ್ಯಾತ ಕಲಾವಿದ ಡಾ. ಎಸ್.ಎಂ. ಪಂಡಿತ್, ಸಿದ್ಧರಾಮ್ ಜಂಬಲದಿನ್ನಿ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಅವರ ಕುರಿತು ಕನ್ನಡ ಸಂವಹನ ಮಾಧ್ಯಮಗಳು ನಿರ್ಲಕ್ಷ್ಯವಹಿಸಿದವು. ಆದಾಗ್ಯೂ, ನಾನು ಹಾಗೂ ಬಸವರಾಜ್ ಪಾಟೀಲ್ ಅವರು ಸೇರಿಕೊಂಡು ಒಂದು ಕಾರ್ಯಕ್ರಮ ಮಾಡಿದೆವು ಎಂದು ಅವರು ತಿಳಿಸಿದರು.
ಕನ್ನಡ ಸಾರಸ್ವತ ಲೋಕದಲ್ಲಿ ಅನೇಕ ಈ ಭಾಗದ ಮಹನೀಯರು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಅವನ್ನು ಪರಿಚಯಿಸುವ, ವಿಮರ್ಶಿಸುವ ಕೆಲಸಗಳನ್ನು ಕನ್ನಡ ಸಂವಹನ ಮಾಧ್ಯಮಗಳು ಮಾಡಬೇಕಾಗಿದೆ. ಇತ್ತೀಚೆಗೆ ಇಂಗ್ಲೀಷ್ ಸಂವಹನ ಮಾಧ್ಯಮಗಳೂ ಸಹ ಕನ್ನಡ ಸಾರಸ್ವತ ಲೋಕವನ್ನು ನಿರ್ಲಕ್ಷಿಸಿವೆ. ಹೀಗಾಗಿ ಇಡೀ ಕನ್ನಡ ಸಾರಸ್ವತ ಲೋಕವು ಸಂವಹನ ಮಾಧ್ಯಮಗಳ ನಿರ್ಲಕ್ಷ್ಯದಿಂದ ಅನಾಥವಾಗಿವೆ. ಇಂತಹ ಅನಾಥಪ್ರಜ್ಞೆಯಿಂದ ಹೊರಬರಲು ಪತ್ರಿಕೆಗಳು ಕನ್ನಡ ಸಾರಸ್ವತ ಲೋಕಕ್ಕೆ ಆದ್ಯತೆ ಕೊಡಬೇಕು ಎಂದು ಅವರು ಅಪೇಕ್ಷಿಸಿದರು.
ನಂತರ ಹಿರಿಯ ಪತ್ರಕರ್ತ ಶೇಷಮೂರ್ತಿ ಅವಧಾನಿ ಅವರು ಪತ್ರಿಕೆ ಮತ್ತು ಸೃಜನಶೀಲ ಸಾಹಿತ್ಯದ ಕುರಿತು ವಿಚಾರ ಮಂಡಿಸಿದರು. ಪತ್ರಕರ್ತರಾದ ರಾಮಕೃಷ್ಣ ಬಡಶೇಷಿ, ಶಂಕರ್ ಕೋಡ್ಲಾ, ಶಿವರಾಯ್ ದೊಡ್ಡಮನಿ, ಸಿದ್ದಣ್ಣ ಮಾಲಗಾರ್, ಸುರೇಶ್ ಡಿ. ಸಿಂಧೆ, ರಾಜಶೇಖರಯ್ಯ ಹೊಕ್ರಾಣಿಮಠ್ ಅವರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಪತ್ರಕರ್ತ ಸ.ದಾ. ಜೋಶಿ ಅವರು ವಹಿಸಿದ್ದರು.