ಸಂಭ್ರಮಾಚರಣೆ, ಸಭೆ ಸಮಾರಂಭ ನಡೆಸದಂತೆ ಎಚ್ಚರಿಕೆ

ಲಿಂಗಸುಗೂರು.ಏ.೨೮-ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡುತ್ತಿದ್ದು ಸಭೆ, ಸಮಾರಂಭ, ಸಂಭ್ರಮಾಚರಣೆಗೆ ಕಡಿವಾಣ ಹಾಕುವಂತೆ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಎಚ್ಚರಿಕೆ ನೀಡಿದರು.
ಸ್ಥಳೀಯ ನ್ಯಾಯಾಲಯದಲ್ಲಿ ಆಯೋಜಿಸಿದ್ದ ವಿಡಿಯೊ ಕಾನ್ಫರೆನ್ಸದಲ್ಲಿ ಸಲಹೆ ನೀಡಿದ ಅವರು, ಮಸ್ಕಿ ಫಲಿತಾಂಶ ಮೇ ೨ ರಂದು ಹೊರಬೀಳಲಿದೆ. ಆ ಸಂದರ್ಭದಲ್ಲಿ ಸಂಭ್ರಮಾಚರಣೆ ಮತ್ತು ಇತರೆ ಸಭೆ ಆಯೋಜಿಸದಂತೆ ನಿರ್ವಹಣೆ ಮಾಡಲು ಸೂಚಿಸಿದರು.
ಹೊರ ರಾಜ್ಯ ಮತ್ತು ರಾಜ್ಯದ ವಿವಿಧ ಪಟ್ಟಣಪ್ರದೇಶಗಳಿಗೆ ಗುಳೆ ಹೋದ ಜನ ವಾಪಸ್ಸು ಬರುತ್ತಿದ್ದಾರೆ. ಅಂಥವರ ವೈದ್ಯಕೀಯ ಪರೀಕ್ಷೆ, ಸರ್ಕಾರ ಮೇಲಿಂದ ಮೇಲೆ ಜಾರಿಗೆ ತರುವ ಕೋವಿಡ್ ನಿಯಮಗಳ ಪಾಲನೆ ಮಾಡಲು ನಿರಂತರ ತಾಲೂಕು ಆಡಳಿತದ ಜೊತೆಗೆ ಸಂಪರ್ಕದಲ್ಲಿ ಇರಲು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಲಕ್ಷ್ಮಿಕಾಂತ ಮಸ್ಕಿ ಮಾತನಾಡಿ, ಹಿರಿಯ ನ್ಯಾಯಾಧೀಶರ ಸಲಹೆ ಸೂಚನೆಗಳನ್ನು ಪರಿಶೀಲಿಸಿ ಸರ್ಕಾರ ಜಾರಿಗೆ ತಂದಿರುವ ಕೋವಿಡ್ ನಿಯಮಗಳ ಪಾಲನೆಗೆ ಕಂದಾಯ, ಆರೋಗ್ಯ, ಪೊಲೀಸ್ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.