ಸಂಭ್ರಮದ ಹೋಳಿ ಆಚರಣೆ


ಲಕ್ಷ್ಮೇಶ್ವರ,ಮಾ.12: ಮನಸ್ಸಿನ ಅರಿಷಡ್ವರ್ಗಗಳು ಕಳೆದು ಪರಸ್ಪರ ಪ್ರೀತಿ-ಸ್ನೇಹ, ಬಾಂಧವ್ಯ-ಸೌಹಾರ್ಧತೆ ಬೆಸೆಯುವ ರಂಗಿನೋಕಳಿ ಹಬ್ಬ ಶನಿವಾರ ಲಕ್ಷ್ಮೇಶ್ವರ ಮತ್ತು ಶಿಗ್ಲಿಯಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ಬೆಳ್ಳಂ ಬೆಳಿಗ್ಗೆಯೇ ಪುಟ್ಟ ಮಕ್ಕಳು ಬಣ್ಣದ ನೀರು ತುಂಬಿದ್ದ ಪಿಚಕಾರಿ ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ಹಿಡಿದು ಪರಸ್ಪರ ಬಣ್ಣ ಹಚ್ಚುವ ಮೂಲಕ ರಂಗಿನಾಟಕ್ಕೆ ರಂಗು ಮೂಡಿಸಿದರು. ಪಟ್ಟಣದ ಹಳ್ಳದ ಕೇರಿ ಓಣಿಯ ಯುವಕ ಸಂಘದವರು ಟ್ರ್ಯಾಕ್ಟರಿನಲ್ಲಿ ರಾಮಮಂದಿರ ಆಕೃತಿ ಮತ್ತು ರತಿ-ಕಾಮಣ್ಣನ ಮೂರ್ತಿಯನ್ನಿರಿಸಿ ಮೆರವಣಿಗೆ ಮಾಡಿದರು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಡಾ. ಚಂದ್ರು ಲಮಾಣಿ, ಶಿರಹಟ್ಟಿ ಮತಕ್ಷೇತ್ರ ಸಮಗ್ರ ಅಭಿವೃದ್ಧಿ ವೇದಿಕೆಯ ಗುರುನಾಥ ದಾನಪ್ಪನವರ ಮಾತನಾಡಿ, ಹೋಳಿ ಹಬ್ಬ ಭಾರತದ ಸಂಸ್ಕøತಿಯ ಪ್ರತೀಕ. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಗುವಂತೆ ವಿವಿಧ ಜಾತಿ, ಧರ್ಮ, ಬಡವ-ಬಲ್ಲಿದ, ಮೇಲು-ಕೀಳು, ಹಿರಿ-ಕಿರಿಯರನ್ನು ಸೇರಿಸಿ ಪರಸ್ಫರರಲ್ಲಿ ಸ್ನೇಹ, ಪ್ರೀತಿ, ವಿಶ್ವಾಸ, ಬಾಂಧವ್ಯ, ಸೌಹಾರ್ಧತೆ ಬೆಸೆಯುವ ಶಕ್ತಿ ಹೋಳಿ ಹಬ್ಬಕ್ಕಿದೆ. ಈ ಹಬ್ಬ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವಾಗಿದೆ. ಪರಸ್ಫರಲ್ಲಿನ ದ್ವೇಷ ಮರೆಸಿ, ಕ್ಷಮಿಸಿ, ಸಂಬಂಧ ಬೆಸೆಯುವ ಮತ್ತು ನಗಿಸಿ-ಕುಣಿಸುವ ಶ್ರೇಷ್ಠತೆಯ ಹಬ್ಬವಾಗಿದೆ. ಪ್ರಸ್ತುತ ಡಿಜೆ ಅಬ್ಬರ, ಸಂಸ್ಕಾರ ರಹಿತ ವರ್ತನೆ, ಸರಾಯಿ ಕುಡಿತದಿಂದ ಹಬ್ಬದ ಆಚರಣೆ ದಾರಿ ತಪ್ಪದಿರಲಿ ಎಂದು ಮನವಿ ಮಾಡಿದರು.
ಈ ವೇಳೆ ಕೆಸಿಸಿ ಬ್ಯಾಂಕ್ ನಿರ್ದೇಶಕ ಸುನೀಲ ಮಹಾಂತಶೆಟ್ಟರ, ವಿಜಯಕುಮಾರ ಹತ್ತಿಕಾಳ, ಯಲ್ಲಪ್ಪಗೌಡ ಉದ್ದನಗೌಡ್ರ, ಎಂ.ಆರ್ ಪಾಟೀಲ, ಮಹೇಶ ಸೋಮಕ್ಕನವರ, ನಿಂಗಪ್ಪ ಬನ್ನಿ, ಮಹೇಶ ಹೊಗೆಸೊಪ್ಪಿನ, ಶಿವು ಕಟಗಿ, ನವೀನ ಬೆಳ್ಳಟ್ಟಿ, ಎನ್.ಆಯ್ ಬೆಲ್ಲದ ಸೇರಿ ಹಲವರಿದ್ದರು.
ಪಟ್ಟಣದ ಹಳ್ಳಕೇರಿ, ಸೊಪ್ಪಿನಕೇರಿ, ಬಸ್ತಿಬಣ, ಪೇಠಬಣ, ವಿನಾಯಕ ನಗರ, ರಂಭಾಪುರಿ ನಗರ, ಸರಾಫ ಬಜಾರ, ಅಂಬೇಡ್ಕರ ನಗರ, ಇಂದಿರಾನಗರ, ಡೋರ್ ಗಲ್ಲಿ, ಹುಲಗೇರಿಬಣ ಸೇರಿ ಹಲವೆಡೆ ಪ್ರತಿಷ್ಠಾಪಿಸಿದ್ದ ರತಿ ಮನ್ಮಥರ ಮತ್ತು ಹುಲಗಾಮನ ಆಕೃತಿ ಮುಂದೆ ಪರಸ್ಫರ ಬಣ್ಣ ಎರಚಿ ಹಲಗೆಯ ನಾದಕ್ಕೆ ಕುಣಿದು ಕೇಕೆ ಹಾಕಿ ಸಂಭ್ರಮಿಸಿದರು.
ಪ್ರತಿ ವರ್ಷಕ್ಕಿಂತ ಈ ವರ್ಷ ಕೊಂಚ ಹೆಚ್ಚೇ ಎನ್ನುವಂತೆ ಮಹಿಳೆಯರೂ ತಮ್ಮ ಏರಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಣ್ಣದಾಟದಲ್ಲಿ ತೊಡಗಿದ್ದು ಕಂಡು ಬಂದಿತು. ಹೆಣ್ಣು ಮಕ್ಕಳು ಗೆಳತಿಯರ ಮನೆ, ಓಣಿಗೆ ಹೋಗಿ ಬಣ್ಣ ಹಚ್ಚಿ ಖುಷಿಪಟ್ಟರು. ಸಣ್ಣ ಹುಡುಗರು ಅಣುಕು ಶವಯಾತ್ರೆ, ಹಲಗೆ ಬಾರಿಸುತ್ತಾ ಕುಣಿದು ಕುಪ್ಪಳಿಸಿದರು. ಡಿಜೆಗೆ ಅವಕಾಶ ಪಡೆದ ಯುವಕರು ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಬೈಕ್ ರೇಡ್ ಮತ್ತು ಸೆಲ್ಪಿಯೊಂದಿಗೆ ರಂಗಿನಾಟದಲ್ಲಿ ಮಿಂದೆದ್ದ ಅನೇಕ ದೃಶ್ಯ ಕಂಡು ಬಂದಿತು.
ಬಿಸಿಲನ್ನು ಲೆಕ್ಕಿಸದೇ ರಂಗಿನೋಕಳಿಯಲ್ಲಿ ಮಿಂದೆದ್ದ ಯುವಕರು ಮಧ್ಯಾಹ್ನದ ತಮ್ಮ ಓಣಿಯಲ್ಲಿ ಪ್ರತಿಷ್ಠಾಪಿಸಿದ್ದ ರತಿಕಾಮನ ಮೂರ್ತಿ ದಹನ ಮಾಡಿ ರಂಗಿನಾಟಕ್ಕೆ ತೆರೆ ಎಳೆದರು. ಹಬ್ಬದ ಸಂಭ್ರಮ ಒಂದೆಡೆಯಾಗಿದ್ದರೆ ಕುಡಿದ ಅಮಲಿನಲ್ಲಿದ್ದ ಕೆಲ ಯುವಕರು ತಮಗರಿವಿಲ್ಲದಂತೆ ವರ್ತಿಸುತ್ತಿದ್ದ ದೃಶ್ಯ ಪ್ರಜ್ಞಾವಂತ ಸಮಾಜಕ್ಕೆ ಪ್ರಶ್ನೆಯಾಗಿ ಕಾಡಿತು. ಮುನ್ನಚ್ಚರಿಕೆ ಕ್ರಮವಾಗಿ ಸಿಪಿಐ ವಿಕಾಸ ಲಮಾಣಿ ನೇತೃತ್ವದಲ್ಲಿ ಪಿಎಸ್‍ಐ ಪ್ರಕಾಶ ಡಿ ಸೂಕ್ತ ಬಂದೋ ಬಸ್ತ್ ನಿರ್ವಹಿಸಿದರು.