ಸಂಭ್ರಮದ ಶ್ರೀ ವೀರಭದ್ರೇಶ್ವರ ಜಾತ್ರೆ

ಇಂಡಿ:ಮೇ.25:ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಇಲ್ಲಿನ ಆರಾದ್ಯ ದೇವ ಶ್ರೀ ವೀರಭದ್ರೇಶ್ವರ ಜಾತ್ರೆಯು ಸಡಗರ ಸಂಭ್ರಮದಿಂದ ನೆರವೇರಿತು.
ಈ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆ ಗ್ರಾಮದ ಸಮಸ್ತ ಭಕ್ತರಿಂದ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಿತು. ಬಳಿಕ ಹಲವು ಭಕ್ತರು ಉತ್ತಮ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಒಟ್ಟು 2 ದಿನಗಳ ಕಾಲ ನಡೆದ ಈ ಜಾತ್ರೆಯಲ್ಲಿ ರಾತ್ರಿ ದೇವಸ್ಥಾನದ ಮುಂಭಾಗದಲ್ಲಿ ಅಗ್ನಿ ಪ್ರಜ್ವಲನ ಕಾರ್ಯಕ್ರಮ ನೆರವೇರಿತು. ಬಳಿಕ ಮರುದಿನ ಅಗ್ನಿ ಪ್ರವೇಶ ಕಾರ್ಯಕ್ರಮ ವಿಜ್ರಂಭಣೆಯಿಂದ ನೆರವೇರಿತು. ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಗಳಲ್ಲಿ ಶ್ರೀ ವೀರಭದ್ರ ದೇವರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.
ದೇವಸ್ಥಾನದಿಂದ ಆರಂಭವಾದ ಈ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಾದಗಟ್ಟಿ ಸ್ಥಳ ತಲುಪಿತು. ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಯು ದೇವಸ್ಥಾನದತ್ತ ಸಂಚರಿಸಿತು. ಈ ಮೆರವಣಿಗೆಯಲ್ಲಿ ವೇಷಭೂಷಣದೊಂದಿಗೆ ಪಾಲ್ಗೊಂಡ ಪುರವಂತರು ಮಾರ್ಗ ಮಧ್ಯ ತಮ್ಮ ಕಲೆ ಪ್ರದರ್ಶಿಸಿ ಭಕ್ತಿ ಸಮರ್ಪಿಸಿದರು. ಈ ವೇಳೆ ಗ್ರಾಮದ ಪುರವಂತ ಈರಣ್ಣ ಮುಜಗೊಂಡ ಅಂದಾಜು 200 ಅಡಿ ಉದ್ದ ಹಗ್ಗವನ್ನು ಕೆನ್ನೆಯ ಮೂಲಕ ಹೊರ ತೆಗೆದು ಭಕ್ತಿ ಸಮರ್ಪಿಸಿ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿದರು, ಬಳಿಕ ಈ ಮೆರವಣಿಗೆ ದೇವಸ್ಥಾನ ತಲುಪಿದ ತಕ್ಷಣ ನೆರೆದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಗ್ನಿ ಪ್ರವೇಶ ಕಾರ್ಯಕ್ರಮ ಸಂಭ್ರಮದಿಂದ ನಡೆದು, ಅನ್ನ ಸಂತರ್ಪಣೆಯೊಂದಿಗೆ ಜಾತ್ರೆ ಸಂಪನ್ನಗೊಂಡಿತು.
ಈ ಉತ್ಸವದಲ್ಲಿ ಸಂಬಾಳ ಕಲಾ ತಂಡದವರು, ಸ್ಥಳಿಯ ಹಾಗೂ ಸುತ್ತಲ ಗ್ರಾಮದ ಪುರವಂತರು, ದೇವಸ್ಥಾನದ ಅರ್ಚಕರು, ಸ್ಥಳಿಯ ಹಾಗೂ ಸುತ್ತಲ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.