ಸಂಭ್ರಮದ ಶ್ರೀ ದೊಡ್ಡಮ್ಮ ತಾಯಿ ಜಾತ್ರಾ ಮಹೋತ್ಸವ

ಮೈಸೂರು, ಡಿ.23: ಪ್ರತಿ ವರ್ಷದಂತೆ ಈ ವರ್ಷವೂ ಸಹ ಎನ್.ಆರ್.ಮೊಹಲ್ಲಾದಲ್ಲಿ ಗ್ರಾಮ ದೇವತೆ ಶ್ರೀ ದೊಡ್ಡಮ್ಮ ತಾಯಿ ಜಾತ್ರಾ ಮಹೋತ್ಸವವನ್ನು ಸಂಭ್ರಮದಿಂದ ನೆರವೇರಿಸಲಾಯಿತು.
ಗ್ರಾಮದ ಜಾತ್ರಾ ಮಹೋತ್ಸವ ಕುರಿತು ಗ್ರಾಮದ ಮುಖಂಡರಾದ ಎನ್.ಕೃಷ್ಣ ಮಾತನಾಡಿ, ಬಹಳ ಹಿಂದೆ ಎನ್.ಆರ್.ಮೊಹಲ್ಲಾದಲ್ಲಿ ಕಾಲರ, ಮಲೇರಿಯಾ ದಂತಹ ಸಾಂಕ್ರಾಮಿಕ ಖಾಯಿಲೆಗಳನ್ನು ಹೋಗಲಾಡಿಸಲು ಈ ರೀತಿ ಗ್ರಾಮ ದೇವತೆಯನ್ನು ಪೂಜಿಸುತ್ತಾ ಬರಲಾಗಿದೆ. ಷಷ್ಠಿ ಆದ ನಂತರದ ಮಂಗಳವಾರದಂದು ಶ್ರೀ ದೊಡ್ಡಮ್ಮ ತಾಯಿ ಜಾತ್ರೆ ಮಾಡಿಕೊಂಡು ಬರಲಾಗಿದೆ ಎಂದು ಹೇಳಿದರು.
ಗುಡ್ಡಪ್ಪ ಮಹದೇವು ಮಾತನಾಡಿ, ಮೊದಲಿಗೆ ವೀರನಗೆರೆಯ ಶ್ರೀ ಮಹದೇವಮ್ಮ ದೇವಾಲಯದಿಂದ ದೊಡ್ಡಮ್ಮ ತಾಯಿ ಉತ್ಸವಮೂರ್ತಿ ತಯಾರಿಸಿ ಮೆರವಣಿಗೆ ಮೂಲಕ ಎನ್.ಆರ್.ಮೊಹಲ್ಲಾದ ದೊಡ್ಡಮ್ಮ ತಾಯಿ ದೇವಾಲಯಕ್ಕೆ ತರಲಾಗುವುದು. ಈ ವೇಳೆ ಪ್ರತಿಯೊಂದು ಮನೆಯವರು ತಂಬಿಟು ಆರತಿ ಮೂಲಕ ದೇವರನ್ನು ಬರ ಮಾಡಿಕೊಳ್ಳುತ್ತಾರೆ. ರಾತ್ರಿ ಇದೇ ರೀತಿ ದೇವರನ್ನು ಜನನಿಬಿಡ ಪ್ರದೇಶದಲ್ಲಿ ಕೂರಿಸುವ ಮೂಲಕ ಜಾತ್ರೆ ಸಂಪನ್ನಗೊಳಲ್ಲಿದೆ. ಈ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವುದಾಗಿ ವಿವರಿಸಿದರು. ಒಟ್ಟಾರೆ ಗ್ರಾಮದೇವತೆ ಮೆರವಣಿಗೆಯಲ್ಲಿ ನೂರಾರು ಮಂದಿ ಸೇರಿದ್ದು ಕಂಡು ಬಂದಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಎಂ.ಜಗಧೀಶ್, ಮುಖಂಡರಾದ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.