ಸಂಭ್ರಮದ ರೇವಣಸಿದ್ದೇಶ್ವರ ಭವ್ಯ ರಥೋತ್ಸವ

ಕಾಳಗಿ.ಮಾ.23 : ತಾಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸುಕ್ಷೇತ್ರ ರೇವಗ್ಗಿ(ರಟಕಲ್) ರೇವಣಸಿದ್ದೇಶ್ವರ ಗುಡ್ಡದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತೋತ್ಸವ ಅಂಗವಾಗಿ ಶುಕ್ರವಾರ ಸಾಯಂಕಾಲ ಅಪಾರ ಭಕ್ತ ಸಮೂಹದ ಮಧ್ಯೆ ಸಡಗರ ಸಂಭ್ರಮದಿಂದ ರೇವಣಸಿದ್ದೇಶ್ವರ ಭವ್ಯ ರಥೋತ್ಸವ ಜರುಗಿತು.

ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ನಸುಕಿನ ಜಾವದಲ್ಲಿ ಜಗದ್ಗುರು ರೇವಣಸಿದ್ದೇಶ್ವರ ಕತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ, ಮಹಾ ಮಂಗಳಾರತಿ, ತೊಟ್ಟಿಲೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ನಂತರ ರಟಕಲ್ ಪೂಜ್ಯ ರೇವಣಸಿದ್ಧ ಶಿವಾಚಾರ್ಯರು ಹಾಗೂ ಪೂಜ್ಯ ಸಿದ್ಧರಾಮ ಮಹಾಸ್ವಾಮಿಗಳು ನೇತೃತ್ವದಲ್ಲಿ 51 ಜಂಗಮ ವಟುಗಳಿಗೆ ಅಯ್ಯಾಚಾರ ಲಿಂಗ ದೀಕ್ಷೆ ನೀಡಲಾಯಿತು. ಬಳಿಕ ಮುತೈದಿಯರು ರೇಣುಕಾಚಾರ್ಯ ಮೂರ್ತಿಯನ್ನು ಬೆಳ್ಳಿ ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿದರು.

ರೇವಗ್ಗಿ ಗ್ರಾಮದಿಂದ ರೇವಣಸಿದ್ದೇಶ್ವರ ಗುಡ್ಡದ ವರೆಗೆ ರೇವಣಸಿದ್ದೇಶ್ವರ ಭಕ್ತ ಬಳಗದ ವತಿಯಿಂದ ಪೂಜ್ಯ ನಿರಗುಡಿಯ ಹವ ಮಲ್ಲಿನಾಥ ಮಹಾರಾಜರ ಸಾನಿಧ್ಯದಲ್ಲಿ ರೇಣುಕಾಚಾರ್ಯ ಭವ್ಯ ಭಾವಚಿತ್ರದ ಮೆರವಣಿಗೆ ಜರುಗಿತು.

ಸಾಯಂಕಾಲ ಕುಂಭ, ಕಳಸ, ಮೀಣಿ, ನಂದಿಕೋಲುಗಳನ್ನು ಡೊಳ್ಳು ಭಾಜ ಭಜಂತ್ರಿಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆ ತರಲಾಯಿತು. ಸೇಡಂ ಸಹಾಯಕ ಆಯುಕ್ತ ಹಾಗೂ ದೇವಸ್ಥಾನ ಆಡಳಿತ ಅಧಿಕಾರಿ ಆಶಪ್ಪ ಪೂಜಾರಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ನೆರೆದಿದ್ದ ಅಪಾರ ಭಕ್ತರಿಂದ ರೇವಣಸಿದ್ದೇಶ್ವರ ಮಹಾರಾಜಕೀ ಜೈ, ರೇಣುಕಾಚಾರ್ಯ ಮಹಾರಾಜ್ ಕಿ ಜೈ ಜಯಘೋಷ ಮೊಳಗಿದವು. ಜನರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ, ನಾಣ್ಯುಗಳನ್ನು ಎಸೆದು ಕೃತಾರ್ಥರಾದರು.

ಹೊನ್ನಕಿರಣಗಿಯ ಪೂಜ್ಯ ಚಂದ್ರಗುಂಡ ಶಿವಾಚಾರ್ಯರು, ಚಂದನಕೇರಿ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಸೂಗುರ ಡಾ. ಚೆನ್ನರುದ್ರಮುನಿ ಶಿವಾಚಾರ್ಯರು, ರಟಕಲ್ ಪೂಜ್ಯ ರೇವಣಸಿದ್ಧ ಶಿವಾಚಾರ್ಯರು, ಪೂಜ್ಯ ಸಿದ್ಧರಾಮ ಮಹಾಸ್ವಾಮಿಗಳು, ಚನ್ನಬಸಪ್ಪ ದೇವರಮನಿ, ದೇವಸ್ಥಾನ ಕಾರ್ಯದರ್ಶಿ ಸದಾಶಿವ ವಗ್ಗೆ, ಅಣವೀರಯ್ಯಸ್ವಾಮಿ ಸಾಲಿ ಸೇರಿದಂತೆ ರೇವಗ್ಗಿ, ರಟಕಲ್, ಗೊಣಗಿ, ಭೆಡಸೂರ, ಅರಣಕಲ್, ಮುಕರಂಬಿ, ಕಂದಗೂಳ, ಚಂದನಕೇರಿ, ಮಾವಿನಸೂರ, ಕೊಟಗಾ ಸೇರಿದಂತೆ ವಿವಿಧಡೆಯಿಂದ ಸಾವಿರಾರು ಭಕ್ತರು ಇದ್ದರು.