ಸಂಭ್ರಮದ ರಥೋತ್ಸವ

ಶಿರಹಟ್ಟಿ,ಮೇ6 : ಕೋಮು ಸೌಹಾರ್ದತೆಯ ಹರಿಕಾರ ಶಿರಹಟ್ಟಿಯ ಕರ್ತೃ ಶ್ರೀ ಜ.ಫಕೀರೇಶ್ವರರ ಮಹಾರಥೋತ್ಸವವು ಶುಕ್ರವಾರ ಸಂಜೆ 5ಗಂಟೆಗೆ ಜರುಗಿತು. ಸಹಸ್ರಾರು ಭಕ್ತರು ಹರಹರ ಮಹಾದೇವ… ಜಯಘೋಷಣೆಯೊಂದಿಗೆ, ಬಿರುಬಿಸಿಲನ್ನುಲೆಕ್ಕಿಸದೇ ರಥವನ್ನು ಮುನ್ನಡೆಸಿದರು.
ಬೆ.8ಗಂಟೆಗೆ ಜ.ಫಕೀರ ಸಿದ್ದರಾಮ ಸ್ವಾಮೀಜಿ ಹಾಗೂ ಉತ್ತರಾಧಿಕಾರಿ ಫ.ದಿಂಗಾಲೇಶ್ವರ ಮಹಾಸ್ವಾಮಿಜಿಯವರು ಶ್ರೀ ಮಠದ ಪೀಠಪರಂಪರೆಯಂತೆ ಹರಿಪೂರ ಗ್ರಾಮವನ್ನು ಬಿಟ್ಟು ಶಿರಹಟ್ಟಿಗೆ ಪುರಪ್ರವೇಶ ಮಾಡುವ ಸಂದರ್ಭದಲ್ಲಿ ಬೃಹತ್ ಮೆರವಣಿಗೆಯ ಮೂಲಕ ಶ್ರೀಗಳನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಡೊಳ್ಳಿನ ಮಜಲು, ಝಾಂಜ್ ಮೇಳ, ನಂಧೀಧ್ವಜ ಹಾಗೂ ಆನೆ, ಒಂಟೆ ನಗಾರಿಯ ನಾದದೊಂದಿಗೆ ಪಟ್ಟಣದ ಮೇಗೇರಿ ಓಣಿಯಲ್ಲಿರುವ ಕರ್ತೃ ಫಕೀರೇಶ್ವರರ ಗದ್ದುಗೆಗೆ ಪೂಜೆಯನ್ನು ಸಲ್ಲಿಸಿ ತದನಂತರ ಶ್ರೀಗಳು ಪಲ್ಲಕ್ಕಿಯಲ್ಲಿ ವಜ್ರ ವೈಢೂರ್ಯವನ್ನು ಧರಿಸಿ ವಿರಾಜಮಾನರಾಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಲಾಯಿತು. ನಂತರ ಮಠಕ್ಕೆ ಬಂದು ಕರ್ತೃ ಫಕ್ಕಿರೇಶ್ವರರ ಪೂಜೆ ಹಾಗೂ ನಿಯಮಗಳನ್ನು ಕೈಗೊಂಡು ಶೆಟ್ಟರ ಓಣಿಯಲ್ಲಿನ ಪವಾಡಶೆಟ್ಟರ ಮನೆಯಲ್ಲಿ ಪ್ರಸಾದ ಸ್ವೀಕರಿಸಿ ನಂತರ ಮೆರವಣಿಗೆಯ ಮೂಲಕ ಸಾಯಂಕಾಲ 4.30ಕ್ಕೆ ಮಠಕ್ಕೆ ಆಗಮಿಸಿ ಧಾರ್ಮಿಕ ವಿಧಿವಿಧಾನಗಳನ್ನು ಲಕ್ಷ್ಮೀ ಪೂಜೆಯನ್ನು ಕೈಗೊಂಡು ರಥದ ಕಡೆಗೆ ಸಾಗಿ ಬಂದು. ನಂತರ ರಥಕ್ಕೆ ಪೂಜೆಯನ್ನು ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.