ಸಂಭ್ರಮದ ಮಧ್ಯ ಧಂಗಾಪೂರ ಯಲ್ಲಮ್ಮಾದೇವಿ ಪಲ್ಲಕ್ಕಿ ಉತ್ಸವ

ಆಳಂದ:ಮೇ.24: ಸಡಗರ ಸಂಭ್ರಮದ ಮಧ್ಯ ತಾಲೂಕಿನ ಧಂಗಾಪೂರ ಗ್ರಾಮದ ಶ್ರೀ ಯಲ್ಲಮ್ಮಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನೆರವೇರಿತು.
ಗ್ರಾಮದ ಸುಕಣ್ಣಾ ಪೂಜಾರಿ ಮನೆಯಿಂದ ದೇವಿಯ ಪಲ್ಲಕ್ಕಿ ಉತ್ಸವ ಆರಂಭಗೊಂಡ ಚೌಡಕಿಯರ ಕುಣಿತ, ಡೊಳ್ಳು ವಾದ್ಯ ಡಿಜೆ ವೈಭವಗಳೊಂದಿಗೆ ದೇವಸ್ಥಾನದ ಭವ್ಯ ಮೆರವಣಿಗೆ ಸಿದ್ರಾಮಪ್ಪ ಆಳಂದ ಅವರ ಹೊಲದಲ್ಲಿನ ದೇವಸ್ಥಾನದ ವರೆಗೆ ಅದ್ಧೂರಿಯಾಗಿ ಗುರುವಾರ ಮೆರವಣಿಗೆ ನಡೆಯಿತು.
ಬೆಳಗಿನ ಜಾವ ಯಲ್ಲಮ್ಮಾ ದೇವಿಗೆ ರುದ್ರಾಭಿಷೇಕ ಬಳಿಕ ಪೂಜಾರಿ ಮನೆಯಿಂದ ಕುಂಬ ಕಳಸದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಪಲ್ಲಕಿಯ ಉತ್ಸವದಲ್ಲಿ ಭಕ್ತಾದಿಗಳು ಕಾಯಿ ಕರ್ಪೂರ ಬೆಳಗಿ ದರ್ಶನ ಪಡೆದುಕೊಂಡರು.
ಸಂಜೆ ಯಲ್ಲಮ್ಮಾದೇವಿ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು. ಜಾತ್ರೆಯ ಮುನ್ನದಿನ ರಾತ್ರಿ ಭಜನೆ, ಕೀರ್ತನೆ ಚೌಡಕಿಯ ಕುಣಿತ ಮತ್ತು ಡೊಳ್ಳಿನ ಕುಣಿತ ಕಾರ್ಯಕ್ರಮ ನಡೆಯಿತು. ಶುಕ್ರವಾರ ಜಂಗಿ ಪೈಲ್ವಾನರ ಕುಸ್ತಿಗಳು ಜರುಗಲಿವೆ.
ಜಾತ್ರಾ ಉತ್ಸವದಲ್ಲಿ ಗುಂಡಪ್ಪ ಕಡೆ, ಬಿಜೆಪಿ ರೈತ ಮೋರ್ಚ ಅಧ್ಯಕ್ಷ ನಾಗರಾಜ ಶೇಗಜಿ, ಕರವೇ ತಾಲೂಕು ಅಧ್ಯಕ್ಷ ಈರಣ್ಣಾ ಜಿ. ಆಳಂದ, ಗುರುಭೀಮರಾವ್ ಆಳಂದ, ಸಿದ್ಧಣ್ಣಾ ಜವಳಿ, ಅಲಗೊಡ ಪಾಟೀಲ, ವಿಠ್ಠಲ ಪೂಜಾರಿ, ಈರಣ್ಣಾ ಮನಿಗಿನಿ, ಮಾಣಿಕ ಪೂಜಾರಿ ಸೇರಿದಂತೆ ನೆರೆ ಹೊರೆಯ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.