
ಕೊಟ್ರೇಶ್ ಉತ್ತಂಗಿಕೊಟ್ಟೂರು, ಆ.21: ಪಂಚಮಿ ಹಬ್ಬ ಬಂದೈತಿ, ಜೋಕಾಲಿ ಕಟ್ಟೈತಿ! ಸುಯ್ಯಂತ ತೂಗಾಕ, ಬರತಿಯೇನ ತಂಗಿ ಹಳ್ಳಿಗೆ ! ಹೂವಿನ ಬಳ್ಳಿಗೆ. ತೂಗಿ ಸೂಸಗಾಳಿ ಬೀಸಾಕ ! ಹೀಗೆ ನಾನಾ ರೀತಿಯ ಜಾನಪದ ಗೀತೆಗಳು ನಾಗರಪಂಚಮಿ ಹಬ್ಬದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹಬ್ಬದ ವೇಳೆ ಗುನುಗುಡುತ್ತವೆ.ತಾಲೂಕಿನಾದ್ಯಂತ ಪಂಚಮಿ ಹಬ್ಬದ ಪ್ರಯುಕ್ತ ಜನರು ತಮ್ಮ ಕುಟುಂಬದ ಸಮೇತ ನಾಗರ ಮೂರ್ತಿ ಹಾಗೂ ನಾಗರ ಹುತ್ತದ ಬಳಿ ತೆರಳಿ ಹಾಲು ಎರೆದು ಉಂಡೆಗಳನ್ನು ಇಟ್ಟು, ನಮಿಸಿ ಭಕ್ತಿಯನ್ನು ಶ್ರಮಿಸುತ್ತಿದ್ದಾರೆ. ಪಂಚಮಿದಂದು ಮನೆಯಲ್ಲಿ ಮತ್ತು ಮರಗಳಲ್ಲಿ ಜೋಕಾಲಿಗಳು ತುಗಾಡುತ್ತಿದ್ದು ಕಾಣಿಸುತ್ತಿತ್ತು ಆದರೆ ಇಂದು ತಂತ್ರಜ್ಞಾನದ ಯುಗದಲ್ಲಿ ಜೋಕಾಲಿ ತುಗಾಡುತ್ತಿರುವ ದೃಶ್ಯ ನೋಡುವುದು ಅಪರೂಪವಾಗಿದೆ.ನಶಿಸುತ್ತಿರುವ ಜೋಕಾಲಿ ಆಟ:ದಶಕಗಳ ಹಿಂದೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರ ಮನೆಯ ಮುಂಭಾಗದ ಮರಗಳಿಗೆ ಜೋಕಾಲಿಯನ್ನು ಕಟ್ಟಿ ತಮ್ಮ ಕುಟುಂಬದ ಸಮೇತ ಮಹಿಳೆಯರು ಜೋಕಾಲಿ ಆಡುವಂತಹ ದೃಶ್ಯ ಕಂಡು ಬರುತ್ತಿತ್ತು.ಆದರೆ ಕಾಲ ಕಳೆದಂತೆಲ್ಲಾ ಜನರು ಜೋಕಾಲಿ ಆಡುವ ದೃಶ್ಯ ಅಪರೂಪವಾಗಿ ನೋಡುವಂತಹ ಕಾಲ ಬಂದಿದೆ.ನಾಗರ ಪಂಚಮಿ ಆಚರಣೆಯ ಹಿನ್ನೆಲೆ:ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ರಾಜ್ ಮಾಸದ ಶುಕ್ಲಪಕ್ಷವನ್ನು ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ್ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ ಮತ್ತು ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ.ಇತಿಹಾಸ :ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ತಂಗಿ ಮತ್ತು ಅವಳಿಗೆ ನಾಲ್ಕು ಜನ ಅಣ್ಣಂದಿರು ಇದ್ದರು. ಮನೆಯವರೆಲ್ಲಾ ಸೇರಿ ಒಟ್ಟಿಗೆ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಅಲ್ಲಿಗೆ ನಾಗರಹಾವೊಂದು ರಭಸದಿಂದ ಬಂದು ನಾಲ್ಕು ಜನ ಅಣ್ಣಂದಿರನ್ನು ಬಲಿ ತೆಗೆದುಕೊಂಡಿತು. ನಂತರ ಆ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ನೋವನ್ನು ತಡೆಯಲಾರದೆ ಆ ನಾಗರಹಾವಿಗೆ ಹೇಳಿದಳು, ನನ್ನ ನಾಲ್ಕು ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು, ನಾನು ಯಾರನ್ನು ಅಣ್ಣ ಎಂದು ಕರೆಯಲಿ ಎಂದು ಕಣ್ಣೀರಿಟ್ಟಳು. ತದ ನಂತರ ಆ ನಾಗರ ಹಾವು ಆಕೆಯ ಮಾತಿಗೆ ಕಿವಿಗೊಟ್ಟು ಅಣ್ಣಂದಿರ ಬಳಿ ಬಂದು ಒಬ್ಬ ಅಣ್ಣನನ್ನು ಪ್ರಾಣಾಪಾಯದಿಂದ ಕಾಪಾಡಿತು. ನಂತರ ಅಣ್ಣ – ತಂಗಿ ಇಬ್ಬರು ಸೇರಿ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಅಂದಿನಿಂದ ಇಂದಿನವರೆಗೂ ಅಣ್ಣ ತಂಗಿಯರು ನಡೆಸುವ ಹಬ್ಬವಾಗಿದೆ.ಪುರಾಣದ ಪ್ರಕಾರ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಸರ್ಪಗಳ ದೂರದ ಬಂಧುವಾದ ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಪ್ರಾಣಿ ಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿತ್ತು.ಉಪವಾಸದಿಂದ ನಾಗರ ಮೂರ್ತಿ ಹಾಲೆರೆಯುವ ಹಿನ್ನಲೆ:೫ ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ‘ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟ ಗಳಿಂದ ಪಾರಾಗಲಿ’ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ.ನಾಗರಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ರಕ್ಷಣೆಯಾಗುತ್ತದೆ. ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ವಚನ ನೀಡಿದನು. ಆದುದರಿಂದಲೇ ಆ ದಿನದಿಂದ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾರೆ.ದಶಕದ ಹಿಂದೆ ಪ್ರತಿ ಮನೆಯ ಮುಂಭಾಗದಲ್ಲಿನ ಮರಗಳಿಗೆ ಜೋಕಾಲಿಯನ್ನು ಕಟ್ಟಿ ಮಹಿಳೆಯರು ತಮ್ಮ ಕುಟುಂಬದ ಸಮೇತ ಆಡುತ್ತಿರುವುದನ್ನು ನಾವು ನೋಡಿದ್ದೇವು. ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಯುವಕ ಮತ್ತು ಯುವತಿಯರು ಶಿಕ್ಷಣಕ್ಕಾಗಿ ಮತ್ತು ಉದ್ಯೋಗಕ್ಕಾಗಿ ಪಟ್ಟಣದ ಕಡೆ ಮುಖ ಮಾಡುತ್ತಿದ್ದಾರೆ, ಈಗ ಮನೆಗಳ ಅಭಿವೃದ್ಧಿಗಾಗಿ ಮರಗಳನ್ನು ಕಡಿಯುತ್ತಿದ್ದಾರೆ, ಹಾಗಾಗಿ. ಪಂಚಮಿದಂದು ಗ್ರಾಮೀಣ ಪ್ರದೇಶದಲ್ಲಿ ಜೋಕಾಲಿ ತುಗಾಡುತ್ತಿರುವ ದೃಶ್ಯ ಕಾಣುವುದು ಅಪರೂಪವಾಗಿದೆ ಎನ್ನುತ್ತಾರೆ ಹಿರಿಯರು.