ಸಂಭ್ರಮದ ಗೌರಿ ಹುಣ್ಣಿಮೆ ಆಚರಣೆ

ಸಂಜೆ ವಾಣಿ ವಾರ್ತೆ
ಕೊಟ್ಟೂರು 20:ಕಾರ್ತೀಕ ಮಾಸದಲ್ಲಿ ಬರುವ ‘ಗೌರಿ ಹುಣ್ಣಿಮೆ’ಯನ್ನು ಶುಕ್ರವಾರ ತಾಲ್ಲೂಕಿನಾದ್ಯಂತ ಹಾಗೂ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಅತ್ಯಂತ ಸಂಭ್ರಮದಿಂದ ಆಚರಿಸಿದರು.
ಗೌರಿಯನ್ನು ಕೂಡಿಸಿ ಆ ಗೌರಿಗೆ ಚೆಂಡು ಹೂವು, ಸೇವಂತಿ ಹಾಗೂ ಅಂಬರ ಹೂಗಳಿಂದ ಅಲಂಕರಿಸಿ ತಟ್ಟೆಗಳಲ್ಲಿ ವಿವಿಧ ಆಕಾರದ ಸಕ್ಕರೆ ಗೊಂಬೆ ಹಾಗೂ ದೀಪಗಳನ್ನು ಇಟ್ಟು ಆರತಿ ಬೆಳಗಿ ಪೂಜೆ ಸಲ್ಲಿಸಿದರು.
ಹಾಲ ಬೆಳದಿಂಗಳ ಬೆಳಕಲ್ಲಿ ಎಲ್ಲ ಮಕ್ಕಳು, ಮಹಿಳೆಯರು ಶೃಂಗಾರಗೊಂಡು ತಟ್ಟೆಗಳಲ್ಲಿ ಆರತಿ ಹಾಗೂ ದೀಪಗಳನ್ನು ಹಚ್ಚಿ ಗೌರಿಗೆ ಆರತಿ ಮಾಡಲು ಹೊರಟಾಗ ಅದರ ಸೊಬಗನ್ನು ನೋಡುವುದೇ ಚೆಂದ. ಆರತಿಯನ್ನು ಬೆಳಗುವಾಗ ಗೌರಿಯ ಕುರಿತು ಹಾಡುಗಳನ್ನು ಹಾಡಿದರು. ಐದು ದಿನಗಳ ಕಾಲ ಅಂದರೆ ಕೃಷ್ಣ ಪಕ್ಷದ ಪಂಚಮಿಯವರೆಗೂ ಗೌರಿಯನ್ನು ಕೂಡಿಸುತ್ತಾರೆ.