ಸಂಭ್ರಮದ ಗೌರಿ-ಗಣೇಶ ಹಬ್ಬ ಆಚರಣೆ

ಹುಳಿಯಾರು, ಸೆ. ೩- ಪಟ್ಟಣದಲ್ಲಿ ಗೌರಿ-ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಹುಳಿಯಾರಿನ ರಾಜ್‌ಕುಮಾರ್ ರಸ್ತೆ, ಬಸ್ ನಿಲ್ದಾಣ, ಕರವೇ ಸರ್ಕಲ್‌ಗಳಲ್ಲಿ ಬಾಗಿನದ ಐಟಂ, ಚೌತೆಕಾಯಿ, ಹಣ್ಣು, ಹೂವಿನ ಸ್ಟಾಲ್‌ಗಳನ್ನು ತೆರೆಯಲಾಗಿತ್ತು.
ಪಟ್ಟಣದ ಹಲವು ದೇವಸ್ಥಾನಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಮಕ್ಕಳು, ಮಹಿಳೆಯರು, ಹಿರಿಯರು ತಮ್ಮ ಕುಟುಂಬದ ಸದಸ್ಯರೊಡನೆ ದೇವಸ್ಥಾನಗಳಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದರು.
ಗೌರಿ ಮೂರ್ತಿಯನ್ನು ಕೆಲವರು ಮನೆಯಲ್ಲೇ ಪ್ರತಿಷ್ಠಾಪನೆ ಮಾಡಿ ಷೋಡಶೋಪಚಾರದಿಂದ ಪೂಜಿಸಿದರು. ಮನೆಯಲ್ಲೇ ಮಂಟಪ ನಿರ್ಮಿಸಿ, ಮಾವಿನ ತೋರಣ, ಬಾಳೆಕಂದು ಕಟ್ಟಿ ಅಲಂಕಾರ ಮಾಡಿ ಗೌರಿ ಮೂರ್ತಿಯನ್ನು ಶೃಂಗರಿಸಿ ಸಡಗರದಿಂದ ಗೌರಿ ಹಬ್ಬ ಆಚರಿಸಿದರು.
ಗೌರಿ ಪ್ರತಿಷ್ಠಾಪಿಸಿದ್ದ ಸ್ಥಳಕ್ಕೆ ತೆರಳಿ ಭಕ್ತರು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮನೆ ಮನೆಗಳಲ್ಲಿ ಸಿಹಿ ಅಡುಗೆ ಮಾಡಿ, ಮನೆಗೆ ಬಂದ ಮುತ್ತೈದೆಯರಿಗೆ ಉಡುಗೊರೆ, ಅರಿಶಿನ-ಕುಂಕುಮ ನೀಡಿ ಆಶೀರ್ವಾದ ಪಡೆದು ಧನ್ಯತಾ ಭಾವ ಮೆರೆದರು. ಬಹುತೇಕ ಮನೆಗಳಲ್ಲಿ ಬಾಗಿನ ನೀಡುವ ಕಾರ್ಯಗಳೂ ಸಹ ನಡೆದವು.