ಸಂಭ್ರಮದಿಂದ ಜರುಗಿದ ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ ಮಹಾರಥೋತ್ಸವ


ಸಂಜೆವಾಣಿ ವಾರ್ತೆ
ಕುರುಗೋಡು:ಏ.11 ಪಟ್ಟಣ ಸಮೀಪದ ಸೋಮಲಾಪುರ ಗ್ರಾಮದಲ್ಲಿ ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ ಮಹಾರಥೋತ್ಸವದಲ್ಲಿ ಸಹಸ್ರಾರು ಭಕ್ತ ಸಮೂಹದೊಂದಿಗೆ ಸೋಮವಾರ ಸಂಭ್ರಮದಿಂದ ಜರುಗಿತು.
ರಥೋತ್ಸವ ಪ್ರಾರಂಭದಲ್ಲಿ ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ 31ನೇ ಪುಣ್ಯರಾಧನೆ ಮತ್ತು ಜಾತ್ರಾ ಮಹೋತ್ಸವ ಅಂಗವಾಗಿ ಕರ್ತೃ ಗದ್ದುಗೆಗೆ ನಸುಕಿನ ಜಾವದಲ್ಲಿ ವಿಶೇಷ ರುದ್ರಾಭಿಷೇಕ, ಬಿಲ್ವರ್ಚನೆ, ಹೋಮ, ಹವನ ಸೇರಿದಂತೆ ಇತರೆ ಧಾರ್ಮಿಕ ಕೈಂಕರ್ಯಗಳು ವಿಧಿವಿದಾನಗಳಿಂದ ಸಾಂಗೋಪಸಾಂಗವಾಗಿ ಜರುಗಿದವು. ಸುತ್ತಮುತ್ತಲಿನ ಭಕ್ತರಿಂದ ಶ್ರೀಗಳಿಗೆ ಅರಿಕೆ ಸಲ್ಲಿಸಲಾಯಿತು.
ಭಕ್ತರು  ಸಾಲು-ಸಾಲಾಗಿ  ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ ಕರ್ತೃ ಗದ್ದುಗೆಗೆ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತ ಮಠದ ಮಠಾಧೀಶರಾದ ಶ್ರೀ ಷಡಕ್ಷರಿ ಅವಧೂತ ಸ್ವಾಮಿಗಳು ರಥೋತ್ಸವಕ್ಕೆ ಸಂಜೆ ಚಾಲನೆ ನೀಡಿದರು.
ನೆರೆದ ಭಕ್ತ ಸಮೂಹದೊಂದಿಗೆ ಸಕಲವಾದ್ಯ ಮೇಳ, ಡೋಳ್ಳುಗಳೊಂದಿಗೆ ಶ್ರೀ ಚಿದಾನಂದ ಅವಧೂತ ಮಹಾಸ್ವಾಮಿಗಳಿಗೆ ಜಯವಾಗಲಿ, ಜಯವಾಗಲಿ ಎಂಬ ಜಯಘೋಷಣೆಗಳನ್ನು ಕೂಗುತ್ತಾ ಮಹಾರಥೋತ್ಸವವನ್ನು  ಎದುರು ಬಸವಣ್ಣ ಗುಡಿಯವರೆಗೆ ಎಳೆದು ಪುನಃ ಸ್ವಾ ಸ್ಥಳಕ್ಕೆ ಕರೆತಂದರು.
ತೇರಿಗೆ ಭಕ್ತರು ಹೂ-ಹಣ್ಣು ಎಸೆದು ಭಕ್ತಿ ಸಮರ್ಪಿಸಿ ಅರೆಕೆ ತೀರಿಸಿದರು. ನೆರೆದಿದ್ದ ಜನಸ್ತೋಮದ ನಡುವೆ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.
ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರು, ರಸ್ತೆಗಳ ನೈರ್ಮಲ್ಯ, ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕುರುಗೋಡು ಪೋಲಿಸ್ ಠಾಣಾ ಪಿ.ಎಸ್.ಐ ಸಣ್ಣ ಈರೇಶ ಮತ್ತು ಸಿಬ್ಬಂದಿಗಳು ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ನೆರೆದ ಜನತೆಗೆ ಮನರಂಜಿಸಲು ಶ್ರೀ ರೇಣುಕಾದೇವಿ ಜಮದಗ್ನಿ ಕಲ್ಯಾಣ ಅರ್ಥಾತ್ ಕಾರ್ತಿ ವೀರ್ಯನ ವಧೆ ಎಂಬ ಪೌರಾಣಿಕ ಬಯಲಾಟ ಪ್ರದರ್ಶನ ಗೊಂಡಿತು.
ಈ ಸಂದರ್ಭದಲ್ಲಿ ಎಮ್ಮಿಗನೂರು, ಕಲ್ಲುಕಂಬ, ಓರ್ವಾಯಿ, ಗುತ್ತಿಗನೂರು, ಕೆರೆಕೆರೆ, ಮುಷ್ಟಗಟ್ಟೆ,    ಕುರುಗೋಡು, ಬಾದನಹಟ್ಟಿ,  ಬೈಲೂರು, ಸಿಂದಿಗೇರಿ, ಕೋಳೂರು, ಕಂಪ್ಲಿ, ಬಳ್ಳಾರಿ, ಹಲಕುರ್ಕಿ, ಹಿರೇ ಮುಚ್ಚಳಗುಡ್ಡ, ಕೊಂಕನಕೊಪ್ಪ, ಮೇಲಿನ ಹಲಕುರ್ಕಿ, ಹಂಸನೂರು, ಗಬ್ಬೇರಕೊಪ್ಪ, ಕಬ್ಬಲಗೇರಿ, ಹುಲ್ಲಿಕೇರಿ, ಆಡಗಲ್, ಆಲೂರು ಎಸ್ ಕೆ, ಚಿಕ್ಕ ಮುಚ್ಚಳಗುಡ್ಡ, ಬೇಡರ ಬೂದಿಹಾಳ್ ಸೇರಿದಂತೆ ಇತರೆ ಗ್ರಾಮಗಳಿಂದ ಸಹಸ್ರಾರು ಭಕ್ತರು ಭಾಗವಹಿಸಿದ್ದರು.