ಸಂಭ್ರಮದಿಂದ ಜರುಗಿದ ಶ್ರೀರಾಮ ಪಟ್ಟಾಭಿಷೇಕ

ಸಂಜೆವಾಣಿ ವಾರ್ತೆ
ಯಳಂದೂರು.ಏ.29:- ಯಳಂದೂರು ತಾಲೂಕಿನ ದೇವಾಂಗ ಬೀದಿಯಲ್ಲಿರುವ ಶ್ರೀರಾಮಮಂದಿರದಲ್ಲಿ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವವು ಭಾನುವಾರ ಸಂಭ್ರಮ ಸಡಗರಗಳಿಂದ ನೆರವೇರಿತು.
ಪಟ್ಟಣದ ದೇವಾಂಗ ಬೀದಿಯಲ್ಲಿರುವ ಶ್ರೀರಾಮಮಂದಿರ ಜಿಲ್ಲೆಯ ಪುರಾತನ ರಾಮಮಂದಿರಗಳಲ್ಲಿ ಒಂದಾಗಿದೆ. ಕಳೆದ ನೂರಾರು ವರ್ಷಗಳಿಂದಲೂ ಇಲ್ಲಿ ರಾಮೋತ್ಸವ ಆಚರಿಸುವ ವಾಡಿಕೆ ಇದೆ. ರಾಮನವಮಿಯ ದಿನ ಶ್ರೀರಾಮ ದೇವರ ಪಟವನ್ನಿಟ್ಟು ವಿಶೇಷ ಪೂಜೆ ಮಾಡಿ ಪಟ್ಟಾಭಿಷೇಕ ಮಹೋತ್ಸವ ಹಮ್ಮಿಕೊಳ್ಳುವ ಸಂಪ್ರದಾಯ ಅನಾದಿ ಕಾಲದಿಂದಲೂ ರೂಢಿಯಲ್ಲಿದೆ.
ಈ ದೇಗುಲಕ್ಕೆ ಬೆಂಗಳೂರು, ತಮಿಳುನಾಡು ಸೇರಿದಂತೆ ಹಲವು ಕಡೆಗಳಲ್ಲೂ ಭಕ್ತರಿದ್ದು ಪಟ್ಟಾಭಿಷೇಕದ ಸಮಯಲ್ಲಿ ಎಲ್ಲರೂ ಬಂದು ಪೂಜೆ ಸಲ್ಲಿಸುವ ವಾಡಿಕೆ ಇದೆ. ಅದರಂತೆ ಭಾನುವಾರ ನಡೆದ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ದೇಗುಲದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ದೇಗುಲವನ್ನು ಹಾಗೂ ದೇವಾಂಗ ಬೀದಿಯನ್ನು ತಳಿರು, ತೋರಣ ಸಿಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಹೋಮ ಹವನಗಳನ್ನು ನೆರವೇರಿಸಲಾಯಿತು.
ವಿಶೇಷ ಬಗೆಯ ಹಣ್ಣು, ದವಸ, ಧಾನ್ಯಗಳನ್ನಿಟ್ಟು ಪೂಜಿಸಲಾಯಿತು. ಮಧ್ಯಾಹ್ನ ಮಹಾಮಂಗಳಾರತಿ ಮಾಡುವ ಮೂಲಕ ಪೂಜಾ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಲಾಯಿತು. ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ಹಾಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಭಕ್ತಿ ಮೆರೆದರು. ರಾಮಮಂದಿರದ ಆಡಳಿತ ಮಂಡಲಿಯ ವತಿಯಿಂದ ಅಚ್ಚುಕಟ್ಟಾಗಿ ಎಲ್ಲಾ ಧಾರ್ಮಿಕ ವಿಧಿಗಳನ್ನು ಸಂಪನ್ನಗೊಳಿಸಲಾಯಿತು.