ಸಂಭ್ರಮದಿಂದ ಜರುಗಿದ ಲಕ್ಷ್ಮೀನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.30: ತಾಲ್ಲೂಕಿನ ಶೀಳನೆರೆ ಹೋಬಳಿಯ ಸಿಂಧಘಟ್ಟ ಗ್ರಾಮದಲ್ಲಿ ಶ್ರೀ ಲಕ್ಷ್ಮಿನಾರಾಯಣಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ತಹಶೀಲ್ದಾರ್ ಡಾ.ಎಸ್.ವಿ.ಲೋಕೇಶ್ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಸಿಂಧಘಟ್ಟ ಇಪ್ಪತ್ತೇಳು ದೇವಾಲಯಗಳಿರುವ ಒಂದು ದೊಡ್ಡ ಗ್ರಾಮವಾಗಿದ್ದು ಈ ಗ್ರಾಮವನ್ನು ಪ್ರವಾಸಿತಾಣವನ್ನಾಗಿ ಅಭಿವೃದ್ದಿಗೊಳಿಸಬೇಕಿದೆ. ಅಲ್ಲದೇ ಇವುಗಳ ಐತಿಹಾಸಿಕ ಹಿನ್ನೆಲೆ ಸಾರುವ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ಮಾಡಬೇಕಿದೆ. ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಶ್ರೀಲಕ್ಷ್ಮೀನಾರಾಯಣಸ್ವಾಮಿಯ ವೈಭವದ ರಥೋತ್ಸವಕ್ಕೆ ವಿವಿಧ ತಾಲ್ಲೂಕು, ಜಿಲ್ಲೆಗಳಿಂದ ಆಗಮಿಸಿರುವ ಭಕ್ತರಿಗೆ ಭಗವಂತನ ಕೃಪೆ ದೊರಕಲಿ ಎಂದು ಆಶಿಸಿದರು. ರಥೋತ್ಸವದ ಅಂಗವಾಗಿ ಬೆಳಿಗ್ಗೆ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಶ್ರೀಲಕ್ಷ್ಮೀನಾರಾಯಣಸ್ವಾಮಿಯ ದೇವಾಲಯವನ್ನು ತಳಿರುತೋರಣ, ರಂಗವಲ್ಲಿಗಳಿಂದ ಅಲಂಕರಿಸಲಾಗಿತ್ತು. ನಂತರ ಮಿಥುನ ಲಗ್ನದಲ್ಲಿ ಲಕ್ಷ್ಮಿನಾರಾಯಣಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತಗೊಳಿಸಲಾಗಿದ್ದ ಬ್ರಹ್ಮರಥದಲ್ಲಿ ಇಡಲಾಯಿತು. ಅರ್ಚಕ ರಂಗನಾಥ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ವಿಪ್ರಭಾಂಧವರು ಸ್ವಾಮಿಗೆ ವಿವಿಧ ಬಗೆಯ ಪೂಜಾಕಂಕೈರ್ಯಗಳನ್ನು ನೆರವೇರಿಸಿದರು. ತಹಶೀಲ್ದಾರ್ ಲೋಕೇಶ್ ಶ್ವೇತವಸ್ತ್ರದಾರಿಗಳಾಗಿ ಪೂಜಾಕಾರ್ಯಗಳಲ್ಲಿ ಭಾಗವಹಿಸಿ ಮೆರವಣಿಗೆಗೆ ಮೆರುಗು ತಂದಿದ್ದರು. ನೂರಾರು ಭಕ್ತರು ಬ್ರಹ್ಮರಥವನ್ನು ಎಳೆಯುವ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರು ಹಣ್ಣುಕಾಯಿ ಕೊಟ್ಟು ಪೂಜೆ ಮಾಡಿಸಿ ಹಣ್ಣುಜವನ ಎಸೆಯುವ ಮೂಲಕ ಶ್ರೀ ಲಕ್ಷ್ಮಿನಾರಾಯಣಸ್ವಾಮಿಯಲ್ಲಿ ತಮ್ಮ ಇಷ್ಟರ್ಥ ಸಿದ್ದಿಗಾಗಿ ಬೇಡಿಕೊಳ್ಳುತ್ತಿದ್ದರು.
ಬ್ರಹ್ಮರಥೋತ್ಸವದಲ್ಲಿ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹಾಗೂ ಹರಳಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಟಿ.ಲೋಕೇಶ್, ಸಿಂಧಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷೆ ದಿವ್ಯಗಿರೀಶ್, ಶೀಳನೆರೆ ಹೋಬಳಿಯ ರಾಜಸ್ವ ನಿರೀಕ್ಷಕ ರಾಜಮೂರ್ತಿ, ಗ್ರಾಮಾಧಿಕಾರಿ ಕೆಂಚಪ್ಪ, ಗ್ರಾಮದ ಮುಖಂಡರಾದ ರವಿ, ಆನಂದ್‍ಕುಮಾರ್, ಗಿರೀಶ್, ಕುಮಾರಸ್ವಾಮಿ, ಕಾಂತರಾಜು, ಶಿವಕುಮಾರ್, ಸೇರಿದಂತೆ ಸಾವಿರಾರು ಭಕ್ತರು ಹಾಜರಿದ್ದರು.