ಸಂಭ್ರಮದಿಂದ ಜರುಗಿದ ಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.17: ಪಟ್ಟಣದ ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಶ್ರೀ ಲಕ್ಷ್ಮೀನಾರಾಯಣಸ್ವಾಮಿಯ ಬ್ರಹ್ಮ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ಶನಿವಾರ ಬೆಳಿಗ್ಗೆ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಹಾಗೂ ತಹಶಿಲ್ದಾರ್ ಲೋಕೇಶ್ ವಿಷೇಶಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀ ಲಕ್ಷ್ಮೀನಾರಾಯಣಸ್ವಾಮಿಯ ಉತ್ಸವಮೂರ್ತಿಯನ್ನು ಅಲಂಕೃತ ಬ್ರಹ್ಮರಥದ ಮೇಲಿರಿಸಿ ನಂತರ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ವಿಶೇಷವಾಗಿ ಅಲಂಕೃತಗೊಂಡು ವಿರಾಜಮಾನವಾಗಿ ಕುಳಿತಿದ್ದ ಶ್ರೀ ಲಕ್ಷ್ಮೀನಾರಾಯಣಸ್ವಾಮಿಗೆ ನೆರೆದಿದ್ದ ಭಕ್ತ ಸಮೂಹ ಹಣ್ಣು ಜವನವನ್ನು ಎಸೆಯುವ ಮೂಲಕ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಭಗವಂತನಲ್ಲಿ ಬೇಡಿಕೊಳ್ಳುತ್ತಿದ್ದರು. ಬ್ರಹ್ಮರಥೋತ್ಸವಕ್ಕೆ ಹೊರ ಜಿಲ್ಲೆ, ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಭಗವಂತನ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು.
ಶಾಸಕ ಹೆಚ್.ಟಿ.ಮಂಜು ಮಾತನಾಡಿ ಹೊಸಹೊಳಲು ಗ್ರಾಮದಲ್ಲಿ ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮೀನಾರಾಯಣಸ್ವಾಮಿಯ ದೇವಾಲಯವಿದ್ದು ಹೊಯ್ಸಳರ ಕಾಲದ ಈ ದೇವಾಲಯಕ್ಕೆ ಪ್ರತಿದಿನ ನೂರಾರು ಸಂಖ್ಯೆಯ ಭಕ್ತರು ಆಗಮಿಸಿ ಇಲ್ಲಿನ ಕಲ್ಲಿನ ಕೆತ್ತನೆಗಳನ್ನು ವೀಕ್ಷಿಸುತ್ತಾರೆ. ಪ್ರತಿವರ್ಷವೂ ಶ್ರೀ ಲಕ್ಷ್ಮೀನಾರಾಯಣಸ್ವಾಮಿಯ ಜಾತ್ರಾಮಹೋತ್ಸವವನ್ನು ಗ್ರಾಮಸ್ಥರು ಬಹಳ ಉತ್ಸಾಹದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಗ್ರಾಮ ದೊಡ್ಡದಾದರೂ ದೇವರ ಹಾಗೂ ಇತರೆ ವಿಚಾರಗಳಲ್ಲಿ ಇಲ್ಲಿನ ಜನತೆ ಒಗ್ಗಟ್ಟಿನಿಂದ ಇರುವುದು ಸಂತಸ ವಿಷಯವಾಗಿದೆ. ದೇವರ ಕಾರ್ಯದ ವಿಚಾರದಲ್ಲಿ ಒಗ್ಗಟ್ಟಿನಿಂದ ವಿಶೇಷಪೂಜೆ, ಅಲಂಕಾರ, ಜಾನಪದ ಕಲಾತಂಡಗಳ ಮೆರವಣಿಗೆ ಸೇರಿದಂತೆ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಶ್ರೀಲಕ್ಷ್ಮೀ ನಾರಾಯಣಸ್ವಾಮಿ ನಾಡಿನ ಬರಗಾಲವನ್ನು ದೂರ ಮಾಡಲಿ, ನಾಡಿಗೆ ಉತ್ತಮ ಮಳೆ, ಬೆಳೆ ಆಗುವಂತೆ ಕರುಣಿಸಲಿ ಹಾಗೂ ನಾಡಿನ ಜನರು ಸಮೃದ್ಧಿಯ ಜೀವನ ನಡೆಸಲು ಆಶೀರ್ವಾದ ಮಾಡುವಂತೆ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಹೆಚ್.ಡಿ.ಅಶೋಕ್, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಆರ್.ಲೋಕೇಶ್, ಡಿ ಪ್ರೇಮ್‍ಕುಮಾರ್, ಕಾಂಗ್ರೆಸ್ ಮುಖಂಡ ವಿಜಯ್‍ರಾಮೇಗೌಡ, ಮನ್ಮುಲ್ ನಿರ್ದೇಶಕ ಡಾಲುರವಿ, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚಂದ್ರೇಗೌಡ, ನಿವೃತ್ತ ಶಿಕ್ಷಕ ಚಿಕ್ಕೇಗೌಡ, ತಾ.ಪಂ.ಮಾಜಿ ಸದಸ್ಯ ರಾಜು, ಶಾಸಕರ ಆಪ್ತ ಸಹಾಯಕ ಪ್ರತಾಪ್, ಸೇರಿದಂತೆ ಸಾವಿರಾರು ಭಕ್ತಾದಿಗಳು ಹಾಜರಿದ್ದರು.