
ಕಾಳಗಿ : ಮಾ.6:ತಾಲೂಕಿನ ಸುಕ್ಷೇತ್ರ ರೇವಗ್ಗಿ(ರಟಕಲ್) ಗುಡ್ಡದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ಯವಾಗಿ ರವಿವಾರ ಸಾಯಂಕಾಲ ಅಪಾರ ಭಕ್ತ ಸಮೂಹದ ಮಧ್ಯೆ ರೇವಣಸಿದ್ದೇಶ್ವರರ ಭವ್ಯ ರಥೋತ್ಸವವು ಬಹು ವಿಜೃಂಬಣೆಯಿಂದ ಜರುಗಿತು.
ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವದ ನಿಮಿತ್ಯವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಶನಿವಾರ ರಾತ್ರಿಯಿಂದ ಬೆಳಗಿನ ಜಾವದವರೆಗೆ ಆಕಾಶವಾಣಿ ಕಲಾವಿದರಿಂದ ಸಂಗೀತ, ಭಜನೆ ಕಾರ್ಯಕ್ರಮ ಜರುಗಿತು. ರವಿವಾರ ಬೆಳಗ್ಗೆ ನಾಗಲಕ್ಷ್ಮೀ ರೇವಪ್ಪ ಮರೆಡ್ಡಿ ಕಣಸೂರ ದಂಪತಿಗಳಿಂದ ರೇವಣಸಿದ್ದೇಶ್ವರ ಹಾಗೂ ಮಾಯಮ್ಮ ದೇವಿ ಬೆಳ್ಳಿ ಮೂರ್ತಿಗೆ ಪುಷ್ಕರಣಿಯಲ್ಲಿ ಗಂಗಾಭಿಷೇಕ ಜರುಗಿತು. ನಂತರ ರೇವಣಸಿದ್ದೇಶ್ವರ ಮಹಾಗದ್ದುಗೆಗೆ ಅರ್ಚಕರ ನೇತೃತ್ವದಲ್ಲಿ ವಿಶೇಷ ಅಭಿಷೇಕ ಜರುಗಿತು.
ಹೊನ್ನಕಿರಣಗಿಯ ಪೂಜ್ಯ ಚಂದ್ರಗುಂಡ ಶಿವಾಚಾರ್ಯರು ಹಾಗೂ ರಟಕಲ್ ರೇವಣಸಿದ್ಧ ಶಿವಾಚಾರ್ಯರ ನೇತೃತ್ವದಲ್ಲಿ ಹೊನ್ನಕಿರಣಗಿ ವೈದಿಕ ಬಳಗದಿಂದ ಸುಮಾರು 80ಜನ ಜಂಗಮ ವಟುಗಳಿಗೆ ಅಯ್ಯಾಚಾರ ಲಿಂಗದೀಕ್ಷೆ ನೀಡಲಾಯಿತು. ಬಳಿಕ 107 ಮುತೈದಿಯರಿಂದ ರೇಣುಕಾಚಾರ್ಯರನ್ನು ಬೆಳ್ಳಿ ತೊಟ್ಟಿಲಿನಲ್ಲಿ ಹಾಕಿ ಜೋಗುಳ ಪದಗಳನ್ನು ಹಾಡಿದರು.
ರೇಣುಕಾಚಾರ್ಯ ಜಯಂತಿ ಅಂಗವಾಗಿ ರೇವಗ್ಗಿ ಗ್ರಾಮದಿಂದ ರೇವಣಸಿದ್ದೇಶ್ವರ ಗುಡ್ಡದವರೆಗೆ ರೇಣುಕಾಚಾರ್ಯರ ಭಾವಚಿತ್ರದ ಭವ್ಯ ಮರೆವಣಿಗೆ ಜರುಗಿತು. ಮೆರವಣಿಗೆಯಲ್ಲಿ ನಿರಗುಡಿಯ ಹವಮಲ್ಲಿನಾಥ ಮಹಾರಾಜರು ಭಾಗವಹಿಸಿ ಭಕ್ತರಿಗೆ ಆಶಿರ್ವಾದಿಸಿದರು.
ನಂತರ ರೇವಗ್ಗಿ ಗ್ರಾಮದಿಂದ ಕುಂಭದ ಮೇರವಣಿಗೆ ಹಾಗೂ ಅರಣಕಲ ಗ್ರಾಮಗಳಿಂದ ನಂದಿಕೋಲುಗಳನ್ನು ಡೊಳ್ಳು ಭಾಜ ಭಜಂತ್ರಿ, ಝೇಂಕಾರಗಳ ಮದ್ಯೆ ಮೆರವಣಿಗೆಯ ಮೂಲಕ ದೇವಸ್ಥಾನ ತಲುಪಿತು. ಹೊನ್ನಕಿರಣಗಿಯ ಪೂಜ್ಯ ಚಂದ್ರಗುಂಡ ಶಿವಾಚಾರ್ಯರು ಹಾಗೂ ವಿವಿಧ ಮಠಾಧೀಶರ ಸಮ್ಮುಖದಲ್ಲಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿದರು. ರಥವು ಸ್ಥಳ ಬಿಡುತ್ತಿದ್ದಂತೆ ನೆರೆದ ಭಕ್ತರೆಲ್ಲರು ರೇಣುಕಾಚಾರ್ಯ ಮಾರಾಜಕೀ ಜೈ ಎಂಬ ಜಯಘೋಷಗಳನ್ನು ಕೂಗುತ್ತಾ ಉತ್ತತ್ತಿ ನಾರು, ಬಾಳೆಹಣ್ಣು, ನಾಣ್ಯಗಳನ್ನು ರಥದತ್ತ ಎಸೆದು ಭಕ್ತಿಯನ್ನು ಸಮರ್ಪಿಸಿದರು.
ರಟಕಲ್ ಪೂಜ್ಯ ರೇವಣಸಿದ್ಧ ಶಿವಾಚಾರ್ಯರು, ಸಿದ್ದರಾಮ ಮಹಾಸ್ವಾಮಿಗಳು. ನಾಗೂರ ಪೂಜ್ಯ ಅಲ್ಲಂಪ್ರಭು ಶಿವಾಚಾರ್ಯರು, ಶಾಸಕ ಡಾ. ಅವಿನಾಶ ಜಾಧವ, ಬಸವಕಲ್ಯಾಣ ಸಹಾಯಕ ಆಯುಕ್ತ ರಮೇಶ ಕೋಲಾರ, ತಹಸಿಲ್ದಾರ ಸಂಗಯ್ಯಸ್ವಾಮಿ, ಮುಖಂಡರಾದ ಶಿವರಾಜ ಪಾಟೀಲ ಗೊಣಗಿ, ರೇವಣಸಿದ್ದಪ್ಪ ಚೆಂಗಟಿ, ಸಿದ್ದಯ್ಯಸ್ವಾಮಿ ಮಠಪತಿ, ರಾಜು ಜಾಧವ, ಇಮ್ತಯಾಜ್ ಅಲಿ ಹೇರೂರ, ಶಿವುಕುಮಾರ ಪಾಟೀಲ ಹೆರೂರ, ದೇವಸ್ಥಾನ ಕಾರ್ಯದರ್ಶಿ ಮಂಜುನಾಥ ನಾವಿ, ಕಂದಾಯ ನೀರಿಕ್ಷಕ ಮಂಜುನಾಥ ಮಹಾರುದ್ರ, ಗ್ರಾಮಲೆಕ್ಕಿಗ ಸಂತೋಷ ಮಾವಿನಕರ್ ಸೇರಿದಂತೆ ರೇವಗ್ಗಿ, ರಟಕಲ್, ಮುಕರಂಬಾ, ಗೊಣಗಿ, ಮಾವಿನಸೂರ, ಅರಣಕಲ್, ಕಂದಗೂಳ, ಬೆಡಸೂರ, ಚಂದನಕೇರಾ, ಕೊಟಗಾ ಗ್ರಾಮದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದರು.