ಸಂಭ್ರಮದಿಂದ ಜರುಗಿದ ರಘೂತ್ತಮತೀರ್ಥ ಆರಾಧನೆ

ಕೆಂಭಾವಿ:ಜ.5: ಪಟ್ಟಣದ ಉತ್ತರಾದಿ ಮಠದಲ್ಲಿ ಕಳೆದ ನಾಲ್ಕು ದಿನಗಳಿಂದ ಉತ್ತರಾದಿ ಮಠದ ಶ್ರೀ ರಘೂತ್ತಮತೀರ್ಥರ 450ನೇ ಆರಾಧನಾ ಮಹೋತ್ಸವವನ್ನು ಅತೀ ವಿಜೃಂಬಣೆಯಿಂದ ಆಚರಿಸಲಾಯಿತು.
ನಾಲ್ಕು ದಿನಗಳ ಕಾಲ ನಡೆದ ವೈಭವೋಪೇತ ಆರಾಧನಾ ಮಹೋತ್ಸವದಲ್ಲಿ ಅರ್ಚಕ ಸವೋತ್ತಮಾಚಾರ್ಯ ಜೋಷಿ ನೇತೃತ್ವದಲ್ಲಿ ಬೆಳಿಗ್ಗೆ ಸುಪ್ರಭಾತ, ಅಷ್ಟೋತ್ತರ, ಪಂಚಾಂಮೃತ, ಯತಿಚತುಷ್ಟಯರ ವೃಂದಾವನಕ್ಕೆ ಹೂಗಳಿಂದ ವಿಶೇಷ ಅಲಂಕಾರ, ಪಲ್ಲಕ್ಕಿ ಮೆರವಣಿಗೆ, ರಥೋತ್ಸವ, ತೀರ್ಥಪ್ರಸಾದ ಸ್ಥಳೀಯ ಕಲಾವಿದರಿಂದ ಸಂಗೀತ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಎರಡು ದಿನಗಳ ಕಾಲ ತಿರುಮಲಾಚಾರ್ಯ ಜೋಷಿ ಅವರಿಂದ ಅನ್ನ ಸಂತರ್ಪಣೆ ಸೇವೆ ಜರುಗಿತು. ಜಯಸತ್ಯಪ್ರಮೋದ ಸೇವಾ ಸಂಘದ ಪದಾಧಿಕಾರಿಗಳು, ರಘೂತ್ತಮ ಭಜನಾ ಮಂಡಳಿ ಹಾಗೂ ಪ್ರಮೋದಿನಿ ಮಹಿಳಾ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.