ಸಂಭ್ರಮದಿಂದ ಜರುಗಿದ ನಾಗನಹಳ್ಳಿಯ ಹಜರತ್ ಹೈದರ್ ಪೀರ್ರ 890ನೇ ಉರಸ್

ಕಲಬುರಗಿ:ಡಿ.10: ನಗರದ ಹೊರವಲಯದ ನಾಗನಹಳ್ಳಿ ರಿಂಗ್ ರಸ್ತೆಯ ಸಮೀಪವಿರುವ ಪ್ರಸಿದ್ಧ ಸೂಫಿ ಸಂತ ಹಜರತ್ ಹೈದರ್ ಪೀರ್(ರಹೆ) ದರ್ಗಾದಲ್ಲಿ ಗಂಧ ಲೇಪನ, ಚಿರಾಗಾ ಮತ್ತು ಜಿಯಾರಾತ್ ಸೇರಿದಂತೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳು, ಆಚರಣೆಗಳೊಂದಿಗೆ 890ನೇ ಉರಸ್ ಸಂಭ್ರಮದಿಂದ ನೆರವೇರಿತು.
ಶನಿವಾರ ರಾತ್ರಿ ನಾಗನಹಳ್ಳಿಯ ಅಬ್ದುಲ್ ರಜಾಕ ಅಬ್ದುಲ್ ಹಮೀದ್ ಸಾಬ್ ಅವರ ಮನೆಯಿಂದ ರಿಂಗ್ ರಸ್ತೆಯ ನಾಗನಹಳ್ಳಿದ ಕ್ರಾಸ್ ಸಮೀಪವಿರುವ ದರ್ಗಾದವರೆಗೆ ಆಕರ್ಷಕ ಕವ್ವಾಲಿ, ಸಂಗೀತ, ವಾದ್ಯಗಳೊಂದಿಗೆ ಜರುಗಿದ ಸಂದಲ್‍ನ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ಈ ದರ್ಗಾಕ್ಕೆ ನೂರಾರು ವರ್ಷಗಳ ಭವ್ಯವಾದ ಇತಿಹಾಸವಿದೆ. ಹಜರತ್ ಹೈದರ್ ಪೀರ್(ರಹೆ) ಅವರು ಸಮಾಜ ಸೇವಕರಾಗಿ, ಅನೇಕ ಭಕ್ತಾದಿಗಳ ಕಾಮಧೇನುವಾಗಿ ಭಕ್ತರ ಕಷ್ಟಗಳನ್ನು ನಿವಾರಿಸಿದ್ದಾರೆ. ಇಂದಿಗೂ ಕೂಡಾ ಸರ್ವ ಧರ್ಮಿಯರು ಸಾಕಷ್ಟು ಸಂಖ್ಯೆಯಲ್ಲಿ ರೀತಿಯಲ್ಲಿ ಧರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ ಎಂದರು.
ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಭಾರತ ದೇಶ ವಿವಿಧಯಲ್ಲಿ ಏಕತೆ ಹೊಂದಿದ್ದು, ಅನೇಕ ಧರ್ಮ, ಜಾತಿಗಳಿವೆ. ಧರ್ಮ, ಜಾತಿ ಆಧಾರಗಳ ಮೇಲೆ ಮೇಲು-ಕೀಳು ಸಲ್ಲದು. ಪ್ರತಿಯೊಂದು ಧರ್ಮವು ತನ್ನದೇ ಆದ ಸಂಸ್ಕøತಿ, ಪರಂಪರೆ, ಉತ್ಸವಗಳನ್ನು ಹೊಂದಿದೆ. ವಿವಿಧ ಧರ್ಮಗಳ ಹಬ್ಬ, ಜಾತ್ರೆ, ಉತ್ಸವಗಳಲ್ಲಿ ಪರಸ್ಪರ ಭಾಗವಹಿಸಿದರೆ ಪ್ರೀತಿ, ಸ್ನೇಹ, ಭಕ್ತಿ, ವಿಚಾರ ವಿನಿಮಯವಾಗುವ ಮೂಲಕ ಕೋಮು ಸಾಮರಸ್ಯ ವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.
ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಅಸ್ಲಾಂ ಶೇಖ್, ಸುಜಯ್ ಎಸ್.ವಂಟಿ, ರಜಾಕ್ ಪಟೇಲ್, ಮೊಹ್ಮದ್ ಅಜರ್, ಅಬ್ದುಲ್ ಅಜೀಜ್, ಅಹ್ಮದ್ ಅಲಿ, ಮೊಹ್ಮದ್ ಮುಖ್ತ್ತಾರ್, ಬಾಬಾ ಪರೀದ್ ಖಾದ್ರಿ, ಮೊಹ್ಮದ್ ಸೈಯದ್, ಶೇಖ್ ತಾಜೋದ್ದೀನ್, ಇರ್ಫಾನ್ ಸಾಹೆಬ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.