ಸಂಭಾಪುರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ


ಗದಗ,ಮಾ.23: ಸಂಭಾಪುರ ಸೇರಿದಂತೆ ನರಗುಂದ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಬದ್ಧವೆಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಗದಗ ತಾಲೂಕಿನ ಸಂಭಾಪುರದಲ್ಲಿ 157 ಲಕ್ಷ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಚುನಾಯಿತ ಪ್ರತಿನಿಧಿಗಳಾದ ನಾವು ಪ್ರತಿ ಮತದಾರನ ಗ್ರಾಮದ ಅಭಿವೃದ್ಧಿಗೆ ಕಂಕಣಬದ್ಧವಾಗಿ ಪ್ರಾಂಜಲ ಮನಸ್ಸಿನಿಂದ ಕಾರ್ಯನಿರ್ವಹಿಸಬೇಕು. ಪಕ್ಷಬೇಧ ಮರೆತು ಅಭಿವೃದ್ಧಿಗೆ ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
ನರಗುಂದ ವಿಧಾನಸಭಾ ಮತಕ್ಷೇತ್ರಕ್ಕೆ 2500 ಮನೆಗಳನ್ನು ಮಂಜೂರು ಮಾಡಲಾಗಿದ್ದು ಅರ್ಹ ವಸತಿರಹಿತ ಫಲಾನುಭವಿಗಳಿಗೆ ಇವುಗಳನ್ನು ನೀಡಲಾಗುವುದು. ಸಂಭಾಪುರ ಗ್ರಾಮಕ್ಕೆ 25 ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದ್ದು ಗ್ರಾಮದ ಅರ್ಹರಿಗೆ ಮನೆಗಳನ್ನು ವಿತರಿಸಲು ಸ್ಥಳೀಯ ಆಡಳಿತ ಕ್ರಮ ವಹಿಸಬೇಕೆಂದು ತಿಳಿಸಿದರು.
ಪ್ರಸ್ತುತ ಸರ್ಕಾರದಲ್ಲಿ ಸಚಿವನಾಗಿ ಸೇವೆ ಮಾಡಲು ಅವಕಾಶ ದೊರೆತಿದ್ದು ನರಗುಂದ ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಹೊಳೆಯನ್ನೇ ಹರಿಸಿದ್ದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದರು. ಕಾರ್ಯಕ್ರಮದ ಕೊನೆಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ನರಗುಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಸಿ.ಪಾಟೀಲ ಅವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಿದರು.

ಲಿಂಗಧಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ ನವಲಗುಂದ, ಸಂಭಾಪುರ ವ್ಯಾಪ್ತಿಯ ಗ್ರಾ.ಪಂ.ಅಧ್ಯಕ್ಷರು, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಉಷಾದಾಸರ, ಗ್ರಾಮಸ್ಥರಾದ ಧರ್ಮರೆಡ್ಡಿ, ವಿರುಪಾಕ್ಷಯ್ಯ ಹಿರೇಮಠ ಸೇರಿದಂತೆ ಗ್ರಾ.ಪಂ. ಸದಸ್ಯರು ಹಾಜರಿದ್ದರು.