ಸಂಬಂಧಗಳನ್ನು ಬೆಸೆಯುವ ಶಕ್ತಿ ಸಾಹಿತ್ಯಕ್ಕಿದೆ

ಮೈಸೂರು : ಏ.10:- ಮೊಬೈಲ್, ಟಿವಿ, ಸಿನಿಮಾಗಳ ಅಬ್ಬರದ ನಡುವೆಯೂ ತಲೆಮಾರುಗಳನ್ನು, ಸಂಬಂಧಗಳನ್ನು ಬೆಸೆಯುವ ಶಕ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಇದೆ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಕರ್ನಲ್ ಪೆÇ್ರ. ವೈ.ಎಸ್. ಸಿದ್ದೇಗೌಡ ಅಭಿಪ್ರಾಯಪಟ್ಟರು.
ಸ್ಪಂದನ ಸಾಂಸ್ಕೃತಿಕ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಸ್ಮಯ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ನಡೆದ ರಾಜ್ಯ ಮಟ್ಟದ ಯುಗಾದಿ ಕಾವ್ಯ ಮೇಳದ ಸಮಾರೋಪ ಹಾಗೂ ಯುವ ಚೇತನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕವಿಗಳು ಮೌಲ್ಯಾಚರಣೆಯ ದ್ಯೋತಕವಾಗಿದ್ದಾರೆ. ತಮ್ಮ ಸಾಹಿತ್ಯದ ಮೂಲಕ ಜನರಲ್ಲಿ ಮೌಲ್ಯಗಳನ್ನು ಬೆಳೆಸುತ್ತಾರೆ. ಋಣಾತ್ಮಕ ಮನೋಭಾವ ಹೋಗಲಾಡಿಸಿ, ಧನಾತ್ಮಕ ಚಿಂತನೆಗಳನ್ನು ಬಿತ್ತಿ ಸದ್ಗುಣಿಗಳನ್ನು ರೂಪಿಸುವಲ್ಲಿ ಕವಿ ಮತ್ತು ಕಾವ್ಯ ಗುರುತರ ಪಾತ್ರ ವಹಿಸುತ್ತದೆ. ಎಂದರು.
ಇದು ಜ್ಞಾನದ ಯುಗ. ಆ ಕಾರಣಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಜ್ಞಾನ ಮತ್ತು ಕೌಶಲ್ಯಕ್ಕೆ ಜೊತೆಗೆ ಮೌಲ್ಯಾಚರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಭಾರತವನ್ನು ಜ್ಞಾನದ ಉತ್ತುಂಗ ಶಿಖರಕ್ಕೆ ಹೊಯ್ದ, ಸಾಂಸ್ಕೃತಿಕವಾಗಿ ಏಳಿಗೆ ಸಾಧಿಸಿಸುತ್ತದೆ. ಜೊತೆಗೆ ಸುಖೀ ಸಮಾಜ ನೆಲೆಗೊಳ್ಳುತ್ತದೆ ಎಂದು ವಿಶ್ಲೇಸಿದರು.
‘ಯುವ ಚೇತನ ಪ್ರಶಸ್ತಿ’ ಪ್ರದಾನ ಮಾಡಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಹಾಗೂ ಸ್ತ್ರೀವಾದಿ ಚಿಂತಕಿ ಪೆÇ್ರ. ಪದ್ಮಾ ಶೇಖರ್, ವರ್ತಮಾನದ ಸಂಕೀರ್ಣ ಸಂದರ್ಭದಲ್ಲಿ ಪ್ರಶಸ್ತಿಗಳು ದಿನೇ ದಿನೆ ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ಅರ್ಹ ಸಾಧಕರಿಗಿಂತ ಅನರ್ಹರ, ಲಾಬಿಕೋರರ ಪಾಲಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಜೀವನ ಹಣದ ಮಾರುಕಟ್ಟೆಯಾಗಿದೆ. ಇಂತಹ ಹೊತ್ತಿನಲ್ಲಿ ಪ್ರಶಸ್ತಿ ಕೊಡುವವರು ತಮ್ಮ ಜೊತೆಗಿನ ಒಡನಾಟ, ಸಂಬಂಧ, ಜಾತಿ, ಹಿಂಬಾಲಕತ್ವ, ಶಿಫಾರಸ್ಸು ಮೊದಲಾದವುಗಳನ್ನು ಪರಿಗಣಿಸಿ ಪ್ರಶಸ್ತಿ ನೀಡುತ್ತಿರುವುದರಿಂದ ಪ್ರಾಮಾಣಿಕ ಸಾಧಕರಿಗೆ ಪ್ರಶಸ್ತಿ ಸಿಗುತ್ತಿಲ್ಲ. ಯಾವುದೇ ಪ್ರಶಸ್ತಿಗೆ ಪ್ರತಿಭೆ, ಸೇವೆ ಮತ್ತು ಸಾಧನೆಯೇ ಸೂಕ್ತ ಮಾನದಂಡವಾಗಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ನಗರಾಧ್ಯಕ್ಷೆ ಹೇಮ ನಂದೀಶ್, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರೇವಣ್ಣ, ಸಮಾಜ ಸೇವಕಿ ಪುಷ್ಪ ಅಯ್ಯಂಗಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಪಿ. ಶಾಂತರಾಜು, ಪದಾಧಿಕಾರಿಗಳಾದ ಟಿ. ಲೋಕೇಶ್, ಡಾ.ಬಿ. ಬಸವರಾಜು, ಡಾ.ಡಿ.ಕೆ. ಉಷಾ, ಚಂದ್ರು ಮಂಡ್ಯ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮೈಸೂರು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಜೆ.ಎಂ. ರಘುನಾಥ್, ಕೋಲಾರದ ರೋಟರಿ ಕ್ಲಬ್ ಅಧ್ಯಕ್ಷ ಬಿ. ಶಿವಕುಮಾರ್, ಮಂಡ್ಯದ ಮಡಿಲು ಸೇವಾ ಟ್ರಸ್ಟಿನ ರಾಜ್ಯ ಸಂಯೋಜಕ ಅರಸು ಮಡಿಲು, ಮೈಸೂರಿನ ಕವಯಿತ್ರಿ ಹಾಗೂ ರಂಗಕರ್ಮಿ ಡಾ.ಬಿ.ಎಸ್. ದಿನಮಣಿ, ಬೆಂಗಳೂರಿನ ಹೂವಿನಹೊಳೆ ಪ್ರತಿಷ್ಠಾನದ ಅಧ್ಯಕ್ಷ ನಂದಿ ಜೆ. ಹೂವಿನಹೊಳೆ, ಸಾಹಿತಿ ಮತ್ತು ಸಂಘಟಕ ಮೈಸೂರಿನ ಎಸ್. ಶಿಶಿರಂಜನ್ ಅವರಿಗೆ ‘ಯುವ ಚೇತನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಇದಕ್ಕೂ ಮುನ್ನ ನಡೆದ ರಾಜ್ಯ ಮಟ್ಟದ ಯುಗಾದಿ ಕಾವ್ಯ ಮೇಳದಲ್ಲಿ 72 ಮಂದಿ ವಿವಿಧ ಜಿಲ್ಲೆಗಳ ಕವಿಗಳು ಕವನ ವಾಚಿಸಿದರು.