ಸಂಪ್ರದಾಯದ ಪ್ರಕಾರ ನೆರವೇರಿತು ತೇಜಸ್ವಿನಿ- ವಿಹಾನ್ ಅಂತ್ಯಸಂಸ್ಕಾರ

ದಾವಣಗೆರೆ.ಜ.೧೧: ಬೆಂಗಳೂರಿನ ಹೆಣ್ಣೂರು ಕ್ರಾಸ್ ಸಮೀಪ ಮೆಟ್ರೋ ಪಿಲ್ಲರ್ ನಿರ್ಮಾಣಕ್ಕೆ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಕುಸಿದು ಬಿದ್ದ ಪರಿಣಾಮ ಮೃತಪಟ್ಟ ಸಾಪ್ಟ್ ವೇರ್ ಎಂಜಿನಿಯರ್ ತೇಜಸ್ವಿನಿ ಹಾಗೂ ಎರಡೂವರೆ ವರ್ಷದ ವಿಹಾನ್ ಮೃತದೇಹ ದಾವಣಗೆರೆಗೆ ಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಭಾವಸಾರ ಕ್ಷತ್ರಿಯ ಸಮಾಜದ ಸಂಪ್ರದಾಯದಂತೆ ಕಣ್ಣೀರ ಕೋಡಿ ನಡುವೆ ಅಂತ್ಯಕ್ರಿಯೆ ನೆರವೇರಿತು. ನಗರದ ಪಿ ಬಿ ರಸ್ತೆಯ ರುದ್ರಭೂಮಿಯಲ್ಲಿ ತೇಜಸ್ವಿನಿ ಹಾಗೂ ಗ್ಲಾಸ್ ಹೌಸ್ ಬಳಿಯ ರುದ್ರಭೂಮಿಯಲ್ಲಿ ವಿಹಾನ್ ಅಂತ್ಯಕ್ರಿಯೆ ಕುಟುಂಬಸ್ಥರ ಆಕ್ರಂದನದ ನಡುವೆ ನಡೆಯಿತು. ತೇಜಸ್ವಿನಿ ತವರು ಮನೆ ದಾವಣಗೆರೆ. ಗದಗ ಮೂಲದ ಲೋಹಿತ್ ಕುಮಾರ್ ಸಲಾಖೆ ನಡುವೆ ವಿವಾಹವಾಗಿತ್ತು. ಆ ಬಳಿಕ ಸಂಸಾರ ಚೆನ್ನಾಗಿಯೇ ಇತ್ತು. ಪುತ್ರಿ ವಿಸ್ಮಿತಾ, ಪುತ್ರ ವಿಹಾನ್ ಜೊತೆಗಿನ ಸುಂದರ ಕುಟುಂಬವಾಗಿತ್ತು. ಆದ್ರೆ, ಬೆಂಗಳೂರಿನಲ್ಲಿ ನಡೆದ ದುರಂತ ಇಡೀ ಕುಟುಂಬಕ್ಕೆ ಶಾಕ್ ತಂದಿದೆ. ಜೊತೆಗೆ ಎಲ್ಲರ ಕಣ್ಣಲ್ಲೂ ನೀರು ಜಿನುಗುತಿತ್ತು. ಲೋಹಿತ್ ಕುಮಾರ್ ಹಾಗೂ ವಿಸ್ಮಿತಾ ಅಪಾಯದಿಂದ ಪಾರಾದರೂ ಅವರು ಸಹ ಕಣ್ಣೀರು ಹಾಕುವ ದೃಶ್ಯ ಎಲ್ಲರ ಮನಕಲುಕುವಂತಿತ್ತು. ದಾವಣಗೆರೆಯ ಕುಂದುವಾಡಕ್ಕೆ ಹೋಗುವ ರಸ್ತೆ ಮಧ್ಯೆ ಬರುವ ಬಸವೇಶ್ವರ ನಗರದ ನಿವಾಸಕ್ಕೆ ನಿನ್ನೆಯೇ ತೇಜಸ್ವಿನಿ ಹಾಗೂ ವಿಹಾನ್ ಮೃತದೇಹ ಬಂದವು. ಆಗ ಮನೆಯ ಮುಂದೆ ಸೇರಿದ್ದವರೆಲ್ಲರ ಗೋಳಾಟ ಕರುಳು ಹಿಂಡುವಂತಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರು, ಕುಟುಂಬಸ್ಥರು, ಸ್ನೇಹಿತರು, ಅಕ್ಕಪಕ್ಕದ ನಿವಾಸಿಗಳು ಬರತೊಡಗಿದರು. ಶವವಾಗಿ ಮಲಗಿದ್ದ ತೇಜಸ್ವಿನಿ ಹಾಗೂ ವಿಹಾನ್ ಕಳೆಬರಹ ನೋಡಿ ಬಿಕ್ಕಿ ಬಿಕ್ಕಿ ಅತ್ತರು. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ತೇಜಸ್ವಿನಿ ತಂದೆ ಜಿ. ಮದನ್ ಹಾಗೂ ತಾಯಿ ರುಕ್ಷ್ಮೀಮಿ ಬಾಯಿ ಅವರು ಬೆಂಗಳೂರಿಗೆ ಹೋಗಿದ್ದರು. ದೊಡ್ಡಪ್ಪರಾದ ನಾರಾಯಣ ರಾವ್,ರಾಘವೇಂದ್ರ ರಾವ್ ಅವರ ಕಣ್ಣಾಲಿಗಳು ತುಂಬಿದ್ದವು.ರಾಜ್ಯ ಸರ್ಕಾರ ನೀಡುವ ಪರಿಹಾರ ಯಾರಿಗೆ ಬೇಕು? ಜೀವ ತಂದುಕೊಡಲು ಆಗುತ್ತಾ? ಯಾರೋ ಮಾಡಿದ ತಪ್ಪಿಗೆ ನಮ್ಮ ಮಗಳು ಬಲಿಯಾದಳು. ಬದುಕಿ ಬಾಳಬೇಕಿದ್ದ ಮೊಮ್ಮಗನನ್ನು ಕಳೆದುಕೊಂಡಿದ್ದೇವೆ. ನಾವೇ ಪರಿಹಾರ ಕೊಡುತ್ತೇವೆ. ಹೋದ ಜೀವ ತಂದುಕೊಡಲು ಆಗುತ್ತಾ? ಕಮೀಷನ್ ಆಸೆಗೆ ಕಳಪೆ ಕಾಮಗಾರಿ ಮಾಡಿರುವುದೇ ಈ ದುರಂತಕ್ಕೆ ಕಾರಣ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ನಮಗೆ ನ್ಯಾಯ ಬೇಕು ಎಂದು ತೇಜಸ್ವಿನಿ ಸಹೋದರಿ, ದೊಡ್ಡಪ್ಪ ಆಗ್ರಹಿಸಿದರು. ತೇಜಸ್ವಿನಿ ಸಹೋದರಿ ಭಾಗ್ಯ ಮಾತನಾಡಿ, ಮೆಟ್ರೋ ಅವಘಡಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು. ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು. ಆಗ ಮಾತ್ರ ನ್ಯಾಯ ಸಿಕ್ಕಂತಾಗುತ್ತದೆ. ದುಡ್ಡು ಯಾರಿಗೆ ಬೇಕು? ಸರ್ಕಾರ ಕೇವಲ ಕಣ್ಣೊರೆಸುವ ತಂತ್ರ ಮಾಡದೇ ತಪ್ಪು ಮಾಡಿದವರಿಗೆ ಶಿಕ್ಷೆ ಮೊದಲು ವಿಧಿಸಲಿ ಎಂದು ಒತ್ತಾಯಿಸಿದರು. ದೊಡ್ಡಪ್ಪ ನಾರಾಯಣ್ ಮಾತನಾಡಿ, ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದ ಬಳಿಕ ಲೋಹಿತ್ ಕುಮಾರ್ ಘಟನೆ ಸಂಬಂಧ ದೂರು ನೀಡಲು ಗೋವಿಂದಪುರ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ದೂರು ಪಡೆಯಲು ವಿಳಂಬ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ದುಃಖದಲ್ಲಿದ್ದ ಲೋಹಿತ್ ಅವರನ್ನು ಠಾಣೆಯಲ್ಲಿ ಹೆಚ್ಚು ಹೊತ್ತು ಕೂರಿಸಿದ ಪೊಲೀಸರ ಕ್ರಮ ಸರಿಯಲ್ಲ. ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಆಗ್ರಹಿಸಿದರು.