ಸಂಪ್‌ನಲ್ಲಿ ಅಡಗಿಸಿಟ್ಟಿದ್ದ 2.68 ಕೋಟಿ ಮೌಲ್ಯದ ರಕ್ತ ಚಂದನ ವಶ

ಬೆಂಗಳೂರು, ಜು.೨೬- ರಕ್ತ ಚಂದನ ಮರದ ತುಂಡುಗಳ ಕಳ್ಳ ಸಾಗಾಣೆ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಪಶ್ಚಿಮ ವಿಭಾಗದ ಪೊಲೀಸರು ೨.೬೮ ಕೋಟಿ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಕ್ತ ಚಂದನ ಮರದ ತುಂಡುಗಳ ಕಳ್ಳ ಸಾಗಾಣೆ ಮಾರಾಟ ಜಾಲದಲ್ಲಿದ್ದ ವಿನೋದ್, ಲಕ್ಷ್ಮಯ್ಯ, ಸಂಜಯ್, ರಾಜು, ಕೃಷ್ಣ ಸೇರಿ ಐವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್‌ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ೨.೬೮ ಕೋಟಿ ರೂ. ಮೌಲ್ಯದ ೧೬೯೩ ಕೆಜಿ ತೂಕದ ರಕ್ತ ಚಂದನ ಮರದ ತುಂಡುಗಳು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಬ್ಯಾಟರಾಯನ ಪುರದ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯ ನ್ಯೂ ಟಿಂಬರ್ ಲೇಔಟ್‌ನಲ್ಲಿ ಅಕ್ರಮವಾಗಿ ರಕ್ತ ಚಂದನ ಮರದ ತುಂಡುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡ ಬ್ಯಾಟರಾಯನಪುರ ಇನ್ಸ್‌ಪೆಕ್ಟರ್ ಶಂಕರ್‌ನಾಯಕ್ ಮತ್ತವರ ತಂಡ ಆರೋಪಿಯೊಬ್ಬನನ್ನು ಬಂಧಿಸಿ ೨ ರಕ್ತ ಚಂದನ ಮರದ ತುಂಡುಗಳು ಹಾಗೂ ೧ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು, ಬಳಿಕ ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆ ನಡೆಸಿ ಆತ ನೀಡಿದ ಮಾಹಿತಿ ಮೇರೆಗೆ ಹೆಸರುಘಟ್ಟದ ಮನೆಯೊಂದರಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿದ್ದ ೧,೫೮೦ ಕೆಜಿ ತೂಕದ ರಕ್ತ ಚಂದನ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಾಚರಣೆ ಕೈಗೊಂಡ ವೇಳೆ ಮತ್ತೊಬ್ಬ ಆರೋಪಿ ಸಂಗ್ರಹಿಸಿದ್ದ ೧೦೧೩ ಕೆಜಿ ರಕ್ತ ಚಂದನ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ಆರೋಪಿಗಳು ಸಂಘಟಿತವಾಗಿ ರಕ್ತ ಚಂದನ ಮರದ ತುಂಡುಗಳ ಜಾಲವನ್ನು ನಡೆಸುತ್ತಿದ್ದು, ಪೊಲೀಸರು ಹಾಗೂ ಸ್ಥಳೀಯರ ಕಣ್ತಪ್ಪಿಸಲು ಮನೆಯ ಸಂಪ್‌ನಲ್ಲಿ ರಕ್ತ ಚಂದನ ಮರದ ತುಂಡುಗಳನ್ನು ಅಡಗಿಸಿಟ್ಟಿದ್ದರು ಎಂದು ತಿಳಿಸಿದರು.
ಜಾಲವನ್ನು ಬೇಧಿಸಿದ ಬ್ಯಾಟರಾಯನಪುರ ಪೊಲೀಸರ ತಂಡಕ್ಕೆ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು. ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರಿದ್ದರು.