ಸಂಪೂರ್ಣ ಸಿದ್ಧಗೊಂಡ ಚಾಮರಾಜೇಶ್ವರಸ್ವಾಮಿ ರಥ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.02:- ಚಾಮರಾಜನಗರ ಸುಪ್ರಸಿದ್ಧ ಶ್ರೀ ಚಾಮರಾಜೇಶ್ವರ ಸ್ವಾಮಿ ರಥವು ಸಂಪೂರ್ಣ ಸಿದ್ಧಗೊಂಡಿದ್ದು, ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಆಷಾಢ ಮಾಸದಲ್ಲಿ ನಡೆಯುವ ಈ ರಥೋತ್ಸವವು ಆಷಾಡದಿಂದ ದೂರವಿರುವ ನವದಂಪತಿಗಳು ಪರಸ್ಪರ ಭೇಟಿಯಾಗಲು ಅಪೂರ್ವ ಸದಾವಕಾಶವನ್ನು ಕಲ್ಪಿಸಲಿದೆ.ನಾಳೆ ಬೆಳಿಗ್ಗೆ ಸ್ಥಳಿಯ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಮೂಲ/ಪೂರ್ವಾಷಾಢ ನಕ್ಷತ್ರದಲ್ಲಿ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಶ್ರೀಮನ್ಮಹಾರಥಾರೋಹಣ ಜರುಗಲಿದೆ. ನಾಡ ದೇವತೆ ಶ್ರೀ ಚಾಮರಾಜೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಆಷಾಢ ಮಾಸದಲ್ಲಿ ನಡೆಯುವ ಈ ರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲೂ ಆಗಮಿಸುತ್ತಾರೆ.
ನವ ದಂಪತಿಗಳಿಗೆ ವಿಶೇಷ ಸಂಭ್ರಮ : ಮದುವೆಯಾದ ಪ್ರಥಮ ಆಷಾಢ ಮಾಸದಲ್ಲಿ ನವದಂಪತಿಗಳು ಪರಸ್ಪರ ದೂರ ಇರುವುದು ವಾಡಿಕೆ. ಇದರಿಂದ ಅವರು ಪರಸ್ಪರ ಮುಖಾಮುಖಿ ಭೇಟಿಯಾಗಲು ಆಗುವುದಿಲ್ಲ. ಆದರೆ ಆಷಾಢ ಮಾಸದಲ್ಲಿ ಚಾಮರಾಜನಗರದಲ್ಲಿ ನಡೆಯುವ ಈ ರಥೋತ್ಸವಕ್ಕೆ ನವದಂಪತಿಗಳÀು ತಮ್ಮ ತಮ್ಮ ಊರಿನಿಂದ ಬೇರೆ ಬೇರೆಯಾಗಿ ಬಂದು ಇಲ್ಲಿನ ನೆಂಟರಿಷ್ಟರ ಮನೆಯಲ್ಲಿ ಅಥವಾ ಪ್ರತ್ಯೇಕವಾಗಿ ಭೇಟಿಯಾಗಿ ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಹಣ್ಣು ಧವನ ಎಸೆಯುತ್ತಾ, ಕೈ ಕೈ ಹಿಡಿದುಕೊಂಡು ಸಂಭ್ರಮದಿಂದ ಓಡಾಡುತ್ತಾರೆ. ಇವರ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ.
ಸಹಸ್ರಾರು ಜನರು ಭಾಗಿ : ಈ ಬಾರಿಯ ರಥೋತ್ಸವದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವುದರಿಂದ ಸಹಸ್ರಾರು ಜನರು ಭಾಗಿಯಾಗುವ ನಿರೀಕ್ಷೆ ಇದೆ.