ಸಂಪೂರ್ಣ ಸಪ್ಪೆ ಬಜೆಟ್: ಕಾರಜೋಳ

ವಿಜಯಪುರ,ಫೆ. 17:ರಾಜ್ಯ ಬಜೆಟ್ ಸಂಪೂರ್ಣ ಸಪ್ಪೆಯಾಗಿದ್ದು, ಅಭಿವೃದ್ಧಿಯನ್ನು ಪ್ರತಿಬಿಂಬಿಸುವ ಯಾವ ಯೋಜನೆಯೂ ಇಲ್ಲ ಎಂದು
ರಾಜ್ಯ ಬಿಜೆಪಿ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದ್ದಾರೆ.
ಈ ಬಜೆಟ್ ಕೇವಲ ಘೋಷಣೆಗೆ ಸೀಮಿತವಾಗಿದೆ ಹೊರತು ಅನುಷ್ಠಾನದ ಯಾವ ಉಲ್ಲೇಖವೂ ಇಲ್ಲ. ಕೇವಲ ಹಿಂದಿನ ಯೋಜನೆಗಳ ಪುನರಾವರ್ತನೆ, ವಿನಾಕಾರಣ ಕೇಂದ್ರದ ಮೇಲೆ ಬೊಟ್ಟು ತೋರಿಸುವ ಮೂಲಕ ಒಂದು ರೀತಿ ರಾಜಕಾರಣದ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ. ಬರದಿಂದ ನಲುಗುತ್ತಿರುವ ರೈತರಿಗೆ ಯಾವ ಅನುಕೂಲಕಾರಿ ಯೋಜನೆ ರೂಪಿಸಿಲ್ಲ ಟೀಕಿಸಿದ್ದಾರೆ. ವಿಜಯಪುರ ಜಿಲ್ಲೆಗಂತೂ ಈ ಬಜೆಟ್ ನಲ್ಲಿ ದೊಡ್ಡ ಅನ್ಯಾಯವಾಗಿದೆ. ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಯಾವ ಮಹತ್ವದ ನಿರ್ಧಾರವಿಲ್ಲ. ಪ್ರವಾಸೋದ್ಯಮ, ವಿಜಯಪುರ ಮಹಾನಗರ ಪಾಲಿಕೆಗೆ ವಿಶೇಷ ಅನುದಾನ ಹೀಗೆ ಯಾವುದಕ್ಕೂ ಬಜೆಟ್ ನಲ್ಲಿ ಘೋಷಣೆ ಮಾಡಿಲ್ಲ. ಜನರ ಆಶ್ವಾಸನೆ ಯಾವುದು ಈಡೇರಿಲ್ಲ. ಕೇವಲ ಘೋಷಣೆ ಅಧಿಕವಾಗಿವೆ. ಜಿಲ್ಲೆಯ ರೈತರಿಗೆ, ದ್ರಾಕ್ಷಿ ಬೆಳೆಗಾರರಿಗೆ, ಕಬ್ಬು ಬೆಳೆಗಾರರಿಗೆ ಉತ್ತೇಜಿಸುವ ನಿಟ್ಟಿನಲ್ಲಿ ಯಾವ ಕಾರ್ಯಕ್ರಮಗಳು ಇಲ್ಲ. ಎಲ್ಲರಿಗೂ, ಎಲ್ಲ ವಲಯಕ್ಕೂ ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ. ಕೇವಲ ಒಂದು ಸಮುದಾಯಕ್ಕೆ ಓಲೈಕೆಯ ರೀತಿಯಲ್ಲಿ ಅನುದಾನ ಮೀಸಲಿರಿಸಿ ಓಲೈಕೆ ರಾಜಕಾರಣ ನೀತಿಯನ್ನು ಬಜೆಟ್ ನಲ್ಲೂ ಮುಂದುವರೆಸಿದ್ದಾರೆ ಎಂದು ಕಾರಜೋಳ ಪ್ರತಿಕ್ರಿಯಿಸಿದ್ದಾರೆ.