ಸಂಪೂರ್ಣ ಲಾಕ್‍ಡೌನ್‍ಗೆ ಸಿರುಗುಪ್ಪ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ

????????????????????????????????????

ಸಿರುಗುಪ್ಪ ಮೇ 21 : ನಗರಸಭೆ, ತಾಲೂಕು ಆಡಳಿತ ಮತ್ತು ಪೋಲೀಸ್ ಇಲಾಖೆಗಳಿಂದ ಬಿಗಿ ಬಂದೋಬಸ್ತ್‍ಗಾಗಿ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದು ಬೆಳಂಬೆಳಿಗ್ಗೆಯಿಂದ ತಹಶೀಲ್ದಾರ್ ಸತೀಶ್.ಬಿ.ಕೂಡಲಗಿಯವರು, ಪೋಲೀಸ್ ಅಧಿಕಾರಿಗಳು, ನಗರದೆಲ್ಲೆಡೆ ಗಸ್ತು ತಿರುಗುವ ಮೂಲಕ ಕದ್ದುಮುಚ್ಚಿ ವ್ಯವಹರಿಸುತ್ತಿರುವ ಅಂಗಡಿಗಳನ್ನು ಮುಚ್ಚಿಸುವುದು ಕಂಡುಬಂದಿತು.
ಸ್ವಯಂ ಲಾಕ್‍ಡೌನ್‍ಗೆ ಮುಂದಾದ ಸಾರ್ವಜನಿಕರು : ತಾಲೂಕು ಆಡಳಿತದಿಂದ ಅನಗತ್ಯವಾಗಿ ಬೀದಿಗಿಳಿಯುವ ವಾಹನಗಳ ನಿಯಂತ್ರಣಕ್ಕಾಗಿ ಮುಖ್ಯರಸ್ತೆಗಳಿಂದ ವಿವಿಧ ವಾರ್ಡ್‍ಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಬೀದಿಗಳನ್ನು ಬಿದಿರು ಕಟ್ಟಿಗೆಗಳಿಂದ ಅಡ್ಡಕಟ್ಟಿ ಸೀಲ್‍ಡೌನ್ ಮಾಡಿದರೆ ಇನ್ನೂ ಕೆಲವು ಬೀದಿಗಳಲ್ಲಿನ ಜನರು ಸ್ವತ: ತಮ್ಮ ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸುವುದು, ಅಥವಾ ಕಟ್ಟಿಗೆಗಳು ಇಲ್ಲವೇ ಮನೆಯಲ್ಲಿರುವ ನಿರುಪಯೋಗಿ ಗೃಹೋಪಕರಣಗಳನ್ನು ಅಡ್ಡಲಾಗಿ ಇಟ್ಟು ಅನಗತ್ಯ ವಾಹನಗಳ ಓಡಾಟವನ್ನು ತಡೆಯುತ್ತಾ ಸಂಪೂರ್ಣ ಲಾಕ್‍ಡೌನ್‍ಗೆ ಸಹಕಾರ ನೀಡುತ್ತಿದ್ದಾರೆ.
ಲಾಕ್‍ಡೌನ್ ಲೆಕ್ಕಿಸದ ವ್ಯಾಪಾರಿಗಳು : ಇನ್ನೂ ಕೆಲವು ವಾರ್ಡ್‍ಗಳಲ್ಲಿ ಯಾವುದೇ ಲಾಕ್‍ಡೌನ್ ಭಯದಲ್ಲೇ ಹೋಟೆಲ್‍ಗಳು, ದಿನಸಿ ಅಂಗಡಿಗಳು, ಮಾಂಸದ ಅಂಗಡಿಗಳು ಅಧಿಕಾರಿಗಳು ಬಂದಾಗ ಮಾತ್ರ ಅಂಗಡಿಗಳ ಬಾಗಿಲುಗಳನ್ನು ಸಂಪೂರ್ಣವಾಗಿ ಮುಚ್ಚಿ ನಂತರ ಅರ್ಧ ಬಾಗಿಲು ತೆಗೆದು ವ್ಯವಹರಿಸುವುದರೊಂದಿಗೆ ಕಣ್ಣಾಮುಚ್ಚಾಲೆ ಆಟವಾಡುತ್ತಿರುವುದು ಮತ್ತೇ ಜನರು ಗುಂಪು ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಿರುವುದು ಸಾಮಾನ್ಯವಾಗಿತ್ತು.
ರಸ್ತೆಯಲ್ಲೇ ಆಟವಾಡಿದ ಮಕ್ಕಳು : ಯಾವಾಗಲೂ ಜನಸಂಚಾರ, ವಾಹನದಟ್ಟಣೆಯಿಂದ ಕೂಡಿರುತ್ತಿದ್ದ ನಗರದ ದೇಶನೂರು ರಸ್ತೆಯಂತೂ ಇಂದು ಮುಕ್ತವಾಗಿದ್ದು ರಸ್ತೆಯಲ್ಲೇ ಮಕ್ಕಳು ಆಟವಾಡಿದರು. ಲಾಕ್‍ಡೌನ್ ಬಗ್ಗೆ ಗೊತ್ತಿದ್ದೂ ರಸ್ತೆಗಿಳಿದ ವಾಹನ ಸವಾರರನ್ನು ಪೋಲೀಸರು ಅಡಗಟ್ಟಿ ವಿಚಾರಿಸಿ ಅನವಶ್ಯಕವಾಗಿ ಸಂಚರಿಸುತ್ತಿದ್ದ ಕೆಲವು ವಾಹನಗಳನ್ನು ಹಿಡಿದು ಧಂಡ ವಿಧಿಸಿ ಎಚ್ಚರಿಸಿದರು.
ಸ್ಯಾನಿಟೈಜಿಂಗೊಳ್ಳುತ್ತಿರುವ ವಾರ್ಡ್‍ಗಳು : ನಗರಸಭೆಯ ಪೌರಕಾರ್ಮಿಕರು ದಿನಾಂಕ 19 ರಿಂದ ನಗರದಲ್ಲಿ ಸ್ಯಾನಿಟೈಜಿಂಗ್ ಮಾಡುತ್ತಿದ್ದು ಕರೋನಾ ನಿಯಂತ್ರಣಕ್ಕಾಗಿ ಸಾರ್ವಜನಿಕರು ಅನುಸರಿಸಬೇಕಾದ ನಿಯಮಗಳು, ಕರ್ತವ್ಯಗಳ ಬಗ್ಗೆ ಕಸ ವಿಲೇವಾರಿ ವಾಹನಗಳ ದ್ವನಿ ಮುದ್ರಣದಲ್ಲಿ ಬಿತ್ತರಿಸುತ್ತಿದ್ದರೂ ಜನರು ಹಾಲು, ಮೊಟ್ಟೆ, ಔಷದಿ, ಆಸ್ಪತ್ರೆ, ಬ್ಯಾಂಕ್‍ನ ನೆಪಹೇಳಿಕೊಂಡು ಗಲ್ಲಿಗಳಲ್ಲಿ ಸುತ್ತುತ್ತುರುವುದು ಮುಂದುವರೆಸಿದ್ದಾರೆ.