ಸಂಪೂರ್ಣ ಲಾಕ್‌ಡೌನ್ ಪ್ರಸ್ತಾಪವಿಲ್ಲ

ಕಲಬುರಗಿ,ಮೇ ೧- ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡುವ ಪ್ರಸ್ತಾಪ ಸದ್ಯ ಸರ್ಕಾರದ ಮುಂದಿಲ್ಲ. ಮುಂದೆ ಪರಿಸ್ಥಿತಿ ಗಮನಿಸಿ ಸಂಪೂರ್ಣ ಲಾಕ್‌ಡೌನ್ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳುವ ಮೂಲಕ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡುವ ಸುಳಿವನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ನೀಡಿದ್ದಾರೆ.
ಕಲಬುರಗಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಸೋಂಕು ನಿಯಂತ್ರಣಕ್ಕೆ ಜನತಾ ಕರ್ಫ್ಯೂ ಜಾರಿ ಮಾಡಿದ್ದೇವೆ. ಜನ ನಿಯಮಗಳನ್ನು ಪಾಲಿಸಬೇಕು. ಅನಗತ್ಯವಾಗಿ ಬೆಳಿಗ್ಗೆ ೧೦ರ ನಂತರವೂ ಓಡಾಡಬಾರದು. ಸ್ವಯಂ ನಿಯಂತ್ರಣ ಅಗತ್ಯ ಎಂದರು.
ರಾಜ್ಯಸರ್ಕಾರದ ಬಿಗಿ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ಅವರ ಮೇಲಿದೆ. ಜನತಾ ಕರ್ಫ್ಯೂ ಹೇರಿ ೪ ದಿನಗಳಾಗಿವೆ. ೪ ದಿನದಲ್ಲೇ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂದು ಭಾವಿಸುವುದು ತಪ್ಪು. ನೆರೆಯ ಮಹಾರಾಷ್ಟ್ರದಲ್ಲಿ ೪೪ ದಿನಗಳ ಕಾಲ ಲಾಕ್‌ಡೌನ್ ನಿಬಂಧಗಳನ್ನು ಹೇರಲಾಗಿತ್ತು. ಇದರಿಂದ ನಿನ್ನೆಯಿಂದ ಮುಂಬೈ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಸೋಂಕು ಇಳಿಕೆಯಾಗುತ್ತಿದೆ. ರಾಜ್ಯದಲ್ಲೂ ಸೋಂಕು ಇಳಿಕೆಗೆ ಸಾಕಷ್ಟು ಕಾಲ ಬೇಕಾಗುತ್ತದೆ ಎಂದರು.
ಜನರ ಸಹಕಾರವಿರದಿದ್ದರೆ ಸೋಂಕು ನಿಯಂತ್ರಣ ಕಷ್ಟ. ಜನ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸಂಪೂರ್ಣ ಲಾಕ್‌ಡೌನ್‌ನಂತಹ ಪರಿಸ್ಥಿತಿಗೆ ಅವಕಾಶ ಮಾಡಿಕೊಡುವುದು ಬೇಡ. ಸದ್ಯಕ್ಕಂತೂ ಸಂಪೂರ್ಣ ಲಾಕ್‌ಡೌನ್ ಪ್ರಸ್ತಾಪವಿಲ್ಲ ಎಂದರು.
ರಾಜ್ಯದಲ್ಲಿ ವರದಿಯಾಗುತ್ತಿರುವ ಸೋಂಕಿನ ಪ್ರಕರಣಗಳಲ್ಲಿ ಶೇ. ೮೦ ರಷ್ಟು ಸೋಂಕಿತರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ. ಶೇ. ೧೫ ರಷ್ಟು ಸೋಂಕಿತರಲ್ಲಿ ಮಾರ್ಡರೇಟ್ ಸೋಂಕಿದೆ ಆದರೂ ಜನ ಆತಂಕ, ಹೆದರಿಕೆಯಿಂದ ಆಸ್ಪತ್ರೆಗೆ ಸೇರುತ್ತಿದ್ದಾರೆ. ಇವರೆಲ್ಲ ಆಸ್ಪತ್ರೆಗೆ ದಾಖಲಾಗುವ ಅಗತ್ಯವೇ ಇಲ್ಲ. ಈ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆದಿದೆ ಎಂದರು.
ಲಸಿಕೆ ಬಂದ ನಂತರ ಅಭಿಯಾನ
ರಾಜ್ಯದಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಅಭಿಯಾನ ಇಂದು ನಡೆಯುತ್ತಿಲ್ಲ. ಲಸಿಕೆ ಬಾರದ ಕಾರಣ ಈ ಅಭಿಯಾನವನ್ನು ಇಂದು ಪೂರ್ಣ ಪ್ರಮಾಣದಲ್ಲಿ ಆರಂಭಿಸುತ್ತಿಲ್ಲ ಹಾಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾಂಖೇತಿಕವಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ
ಚಾಲನೆ ನೀಡಿದ್ದಾರೆ. ಲಸಿಕೆ ಬಂದ ನಂತರ ಈ ಅಭಿಯಾನ ಆರಂಭವಾಗಲಿದೆ. ಯಾವಾಗ ಎಂಬುದನ್ನು ಲಸಿಕೆ ಬಂದ ನಂತರ ಹೇಳುವುದಾಗಿ ಅವರು ಹೇಳಿದರು.
ಸಿಟಿ ಸ್ಕ್ಯಾನ್ ದರಕ್ಕೆ ಕಡಿವಾಣ
ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟೀವ್ ವರದಿ ಬರುವವರಿಗೆ ನಡೆಸುವ ಸಿಟಿ ಸ್ಕ್ಯಾನ್‌ಗೆ ಕೆಲವರು ಹೆಚ್ಚು ದರ ವಸೂಲಿ ಮಾಡುತ್ತಿರುವ ದೂರುಗಳಿದ್ದು, ಇಂದು ಸಂಜೆಯೊಳಗೆ ಸಿಟಿ ಸ್ಕ್ಯಾನ್‌ಗೆ ರಾಜ್ಯಾದ್ಯಂತ ಏಕ ರೂಪ ದರ ನಿಗದಿಪಡಿಸಲಾಗುವುದು ಎಂದು ಅವರು ಹೇಳಿದರು.
ಕೆಲವರಿಗೆ ಅಗತ್ಯವಿಲ್ಲದಿದ್ದರೂ ರೆಮಿಡಿ ಸಿಮಿರ್ ಮತ್ತು ಆಮ್ಲಜನಕವನ್ನು ಬಳಸುತ್ತಿರುವ ಪ್ರಕರಣಗಳಿಗೆ ತಡೆ ಹಾಕಲು ಆಕ್ಸಿಜನ್ ಮತ್ತು ರೆಮಿಡಿ ಸಿಮಿರ್ ಔಷಧ ಬಳಕೆಗೆ ರಾಜ್ಯಸರ್ಕಾರ ಜಾರಿಮಾಡಿರುವ ಮಾನದಂಡಗಳನ್ನು ಕಟ್ಟುನಿಟ್ಟಾಗಿ ವೈದ್ಯರಿಗೆ ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಸಾವಿನ ಲೆಕ್ಕ ತಪ್ಪು ನೀಡಲಾಗುತ್ತಿದೆ ಎಂಬ ಆರೋಪಗಳು ಸರಿಯಿಲ್ಲ. ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಎಲ್ಲವೂ ಐಸಿಎಂಆರ್ ಪೋರ್ಟಲ್‌ಗೆ ಅಪ್‌ಲೋಡ್ ಆಗುತ್ತಿದೆ ಎಂದವರು ಸ್ಪಷ್ಟಪಡಿಸಿದರು.