ಸಂಪೂರ್ಣ ಲಾಕ್‌ಡೌನ್ ಜಾರಿ ಅಸಾಧ್ಯ:ರವಿಕುಮಾರ್

ಬೆಂಗಳೂರು,ಏ.೨೪- ರಾಜ್ಯದಲ್ಲಿ ವೀಕ್‌ಎಂಡ್ ಕರ್ಫ್ಯೂ ಮುಂದುವರೆಸಿದರೆ ಸೂಕ್ತ. ವಾರದ ದಿನಗಳಲ್ಲೂ ವೀಕ್‌ಎಂಡ್ ಕರ್ಫ್ಯೂ ಮುಂದುವರೆದರೆ ಒಳ್ಳೆಯದು ಎಂಬ ಅಭಿಪ್ರಾಯ ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವೀಕ್‌ಎಂಡ್ ಕರ್ಫ್ಯೂ ಮುಂದುವರೆಸಿದರೆ ಒಳಿತು ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂದಿದೆ. ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ಎಲ್ಲವನ್ನೂ ಸರ್ಕಾರವೇ ಮಾಡುತ್ತದೆ ಎಂದು ಜನರು ತಿಳಿಯಬಾರದು. ಜನರಿಗೂ ಜವಾಬ್ದಾರಿ ಇದೆ. ಆದ್ದರಿಂದ ಅನಗತ್ಯವಾಗಿ ಹೊರಗಡೆ ಸಂಚರಿಸಬಾರದು. ರಾಜ್ಯದಲ್ಲಿ ಸೋಂಕಿನ ಪ್ರಮಾಣ ತ್ವರಿತ ಗತಿಯಲ್ಲಿ ಹೆಚ್ಚಾಗುತ್ತಿದೆ. ಸೋಂಕು ಕಡಿಮೆಯಾಗಬಹುದೆಂಬ ನಂಬಿಕೆ ಇದೆ ಎಂದರು.
ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಾಣಿಜ್ಯ ಚಟುವಟಿಕೆಗಳು ನಡೆಯಬೇಕಿದೆ. ಹೀಗಾಗಿ ಸಂಪೂರ್ಣ ಲಾಕ್‌ಡೌನ್ ಮಾಡಲು ಸಾಧ್ಯವಿಲ್ಲ ಎಂದು ರವಿಕುಮಾರ್ ಪ್ರಶ್ನೆಯೊಂದಕ್ಕು ಉತ್ತರಿಸಿದರು.