ಸಂಪೂರ್ಣ ಲಾಕ್‌ಡೌನ್‌ಗೆ ಚಿಂತನೆ

ಬೆಂಗಳೂರು, ಏ. ೧೮- ರಾಜಧಾನಿ ಬೆಂಗಳೂರಿನಲ್ಲಿ ಸುನಾಮಿಯಂತೆ ಆರ್ಭಟಿಸುತ್ತಿರುವ ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಪೂರ್ಣ ಲಾಕ್‌ಡೌನ್‌ಗೆ ಒತ್ತಡಗಳು ಹೆಚ್ಚುತ್ತಿರುವಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಲಾಕ್‌ಡೌನ್ ಜಾರಿ ಮಾಡಬೇಕೇ ಬೇಡವೇ ಎಂಬ ಬಗ್ಗೆ ಸರ್ಕಾರ ನಾಳೆ ತೀರ್ಮಾನ ಕೈಗೊಳ್ಳಲಿದೆ.
ಬೆಂಗಳೂರಿನಲ್ಲಿ ಕೊರೊನಾ ತಡೆಗೆ ಜಾರಿಗೊಳಿಸಬೇಕಾದ ಬಿಗಿ ಕ್ರಮಗಳ ಬಗ್ಗೆ ಚರ್ಚಿಸಲು ಕಂದಾಯ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಬೆಂಗಳೂರಿನ ಎಲ್ಲ ಜನಪ್ರತಿನಿಧಿಗಳ ಸಭೆ ನಾಳೆ ವಿಧಾನಸೌಧದಲ್ಲಿ ನಡೆಯಲಿದ್ದು, ಈ ಸಭೆಯಲ್ಲಿ ಲಾಕ್‌ಡೌನ್ ಜಾರಿಮಾಡಬೇಕೇ ಬೇಡವೇ ಎಂಬ ಬಗ್ಗೆಯೂ ಚರ್ಚೆಗಳು ನಡೆಯಲಿದ್ದು, ಒಂದು ವೇಳೆ ಲಾಕ್‌ಡೌನ್ ತೀರ್ಮಾನ ಆಗದಿದ್ದರೆ ಲಾಕ್‌ಡೌನ್ ಹೊರತುಪಡಿಸಿ ರಾತ್ರಿ ಕೊರೊನಾ ಕರ್ಫ್ಯೂ ಮುಂದುವರಿಕೆ, ಜತೆಗೆ ವಾರಾಂತ್ಯದ ಲಾಕ್‌ಡೌನ್ ಜಾರಿ, ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡುವ ಮಹತ್ತರ ತೀರ್ಮಾನಗಳನ್ನು ನಾಳಿನ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.
ಜನರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ನಗರದಾದ್ಯಂತ ೧೪೪ ಸೆಕ್ಷೆನ್ ಜಾರಿ ಮಾಡುವ ತೀರ್ಮಾನವು ನಾಳಿನ ಸಭೆಯಲ್ಲಿ ಆಗಲಿದೆ ಎಂದು ಹೇಳಲಾಗಿದೆ.
ಅವಶ್ಯ ಸೇವೆಗಳನ್ನೊರತುಪಡಿಸಿ ಉಳಿದಂತೆ ಹೆಚ್ಚು ಜನ ಸೇರುವ ಸ್ಥಳಗಳನ್ನು ಅಂದರೆ ಹೋಟೆಲ್, ಬಾರ್, ಪಬ್‌ಗಳನ್ನು ಬಂದ್ ಮಾಡುವ ಬಗ್ಗೆಯೂ ಸ್ಪಷ್ಟ ತೀರ್ಮಾನಗಳು ನಾಳಿನ ಸಭೆಯಲ್ಲಿ ಆಗಲಿದೆ ಎಂದು ಹೇಳಲಾಗಿದೆ.
ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳಿಗೂ, ವ್ಯಾಪಾರಕ್ಕೆ ಸಮಯ ನಿಗದಿ ಮಾಡುವ ತೀರ್ಮಾನವನ್ನು ಸರ್ಕಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.
ರಾಜ್ಯದಲ್ಲಿ ವರದಿಯಾಗುತ್ತಿರುವ ಕೊರೊನಾ ಪ್ರಕರಣಗಳಲ್ಲಿ ಶೇ. ೭೫ ಕ್ಕೂ ಹೆಚ್ಚು ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲೇ ದೃಢಪಡುತ್ತಿದ್ದು, ಬೆಂಗಳೂರಿನ ಪರಿಸ್ಥಿತಿ ತೀರಾ ಕೆಟ್ಟದ್ದಾಗಿದೆ. ಹಾಗಾಗಿ ಬೆಂಗಳೂರಿನ ಮಟ್ಟಿಗೆ ಬಿಗಿ ಕ್ರಮಗಳನ್ನು ಜಾರಿ ಮಾಡುವ ಅನಿವಾರ್ಯತೆ ಎದುರಾಗಿದೆ.
ಕೊರೊನಾ ಸೋಂಕಿನ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರ ನಿರ್ದೇಶನದಂತೆ ಈ ಸಭೆಯನ್ನು ನಡೆಸಲಾಗುತ್ತಿದೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ನಾಳೆ ಮಧ್ಯಾಹ್ನ ೩ ಗಂಟೆಗೆ ವಿಧಾನಸೌಧದಲ್ಲಿ ಬೆಂಗಳೂರಿನ ಎಲ್ಲ ಜನಪ್ರತಿನಿಧಿಗಳ ಸಭೆ ನಡೆಯುತ್ತಿದ್ದು, ಬೆಂಗಳೂರನ್ನು ಕೊರೊನಾ ಕಪಿ ಮುಷ್ಠಿಯಿಂದ ಪಾರು ಮಾಡಲು ವಾರಾಂತ್ಯದ ಲಾಕ್‌ಡೌನ್, ರಾತ್ರಿ ಕೊರೊನಾ ಕರ್ಫ್ಯೂವನ್ನು ರಾತ್ರಿ ೧೦ರ ಬದಲು ೮ ಗಂಟೆಯಿಂದಲೇ ಜಾರಿ ಮಾಡುವ ಬಗ್ಗೆಯೂ ಚರ್ಚೆಗಳಾಗಲಿವೆ.
ಬೆಂಗಳೂರಿನಲ್ಲಿ ನಿತ್ಯ ಸೋಂಕು ಹೆಚ್ಚಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಕಷ್ಟವಾಗಬಹುದು. ಹಾಗಾಗಿ ಎಲ್ಲರೊಡನೆ ಚರ್ಚಿಸಿ ಬಿಗಿ ಕ್ರಮಗಳನ್ನು ಜಾರಿಗೊಳಿಸಲಾಗುವುದು. ಮುಖ್ಯಮಂತ್ರಿ ಯಡಿಯೂರಪ್ಪನವರು ಸಾಧ್ಯವಾದರೆ ಆಸ್ಪತ್ರೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ತಿಂಗಳ ೨೦ ರಂದು ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದರು. ಮುಖ್ಯಮಂತ್ರಿಗಳು ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರ ಅನುಪಸ್ಥಿತಿಯಲ್ಲಿ ಆರ್. ಅಶೋಕ್ ಸಭೆ ನಡೆಸುತ್ತಿದ್ದಾರೆ.
ಈ ಸಭೆಯ ತೀರ್ಮಾನಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮಂಗಳವಾರದಿಂದ ರಾಜ್ಯದಲ್ಲಿ ಕೆಲವು ಕಠಿಣ ತೀರ್ಮಾನಗಳು ಜಾರಿಯಾಗುವ ಸಾಧ್ಯತೆಗಳು ಹೆಚ್ಚಿವೆ.
ಆ ಕಠಿಣ ತೀರ್ಮಾನಗಳು ವಾರಾಂತ್ಯದ ಲಾಕ್‌ಡೌನ್, ಹೋಟೆಲ್, ಬಾರ್, ಪಬ್ ಬಂದ್ ವಿಷಯಗಳು ಇವೆ ಎಂದು ಹೇಳಲಾಗಿದೆ.
ನಾಳಿನ ಸಭೆಯಲ್ಲಿ ಪಾಲ್ಗೊಳ್ಳುವಂತೆ ಬೆಂಗಳೂರಿನ ಎಲ್ಲ ಸಚಿವರು, ಶಾಸಕರು, ಸಂಸದರಿಗೂ ಈಗಾಗಲೇ ಆಹ್ವಾನ ನೀಡಲಾಗಿದೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸಹ ನಾಳಿನ ಸಭೆಯಲ್ಲಿ ಪಾಲ್ಗೊಳ್ಳುವರು.