ಸಂಪೂರ್ಣ ಬಹುಮತ ಸರ್ಕಾರ ಕೊಡಿ: ರಾಜನಾಥ್ ಸಿಂಗ್

ಮೈಸೂರು: ಏ.30:- ಭಾರತ ದೇಶ ಶಕ್ತಿಶಾಲಿ ದೇಶವಾಗಿದೆ. ಇದನ್ನು ಮುಂದುವರಿಸಲು ನಮಗೆ ಮತ ನೀಡಿ. ನಮಗೆ ದುರ್ಬಲ ಸರ್ಕಾರ ಬೇಡ, ಸಂಪೂರ್ಣ ಬಹುಮತದ ಸರ್ಕಾರ ಬೇಕಾಗಿದೆ. ಮೂರನೇ ಎರಡರಷ್ಟು ಬಹುಮತದ ಬಿಜೆಪಿ ಸರ್ಕಾರ ಬರಬೇಕು ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಕೃಷ್ಣರಾಜಕ್ಷೇತ್ರದ ವಿವೇಕಾನಂದ ವೃತ್ತದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಹು ದಿನಗಳ ನಂತರ ಮೈಸೂರಿಗೆ ಬಂದಿದ್ದೇನೆ. ಈ ಭೂಮಿಯಲ್ಲಿ ಮಹಾಪುರುಷರು ಬಂದು ಹೋಗಿದ್ದಾರೆ. ಕಳೆದ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಇರಲಿಲ್ಲ. ಮೊದಲು ಯಡಿಯೂರಪ್ಪ, ಬಳಿಕ ಕುಮಾರಸ್ವಾಮಿ, ಆ ನಂತರ ಮತ್ತೆ ಯಡಿಯೂರಪ್ಪ, ಆ ಬಳಿಕ ಬಸವರಾಜ ಬೊಮ್ಮಾಯಿ ಸಿಎಂ ಆದರು. ಹೀಗಾಗಿ ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯಬೇಕು ಎಂದರು.
ಕೃಷ್ಣರಾಜ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ಅಭ್ಯರ್ಥಿ ಮಾಡಿದ್ದೇವೆ. ಶ್ರೀವತ್ಸ ಅನೇಕ ವರ್ಷದಿಂದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಾರೆ. ಶ್ರೀವತ್ಸ ಶಾಸಕ ಅಲ್ಲ, ಆಯ್ಕೆ ಮಾಡಿದರೆ ಸೇವಕನಾಗಿ ಕೆಲಸ ಮಾಡಲಿದ್ದಾರೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರವಿದೆ. ಭ್ರಷ್ಟಾಚಾರ ರಹಿತ ಸರ್ಕಾರವನ್ನು ಮೋದಿ ಕೊಟ್ಟಿದ್ದಾರೆ. ರಾಜ್ಯದಲ್ಲೂ ಭ್ರಷ್ಟಾಚಾರ ಮಾಡಲು ಅವಕಾಶ ಕೊಡುವುದಿಲ್ಲ. ಭ್ರಷ್ಟಾಚಾರ ಮಾಡಿದವರ ಮನೆಯನ್ನು ವಶಕ್ಕೆ ಪಡೆಯುತ್ತೇವೆ. ರಾಜೀವ್ ಗಾಂಧಿ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರವೇ ಹೇಳಿಕೊಂಡಂತೆ 100 ಪೈಸೆಯನ್ನು ಸರ್ಕಾರ ಕೊಟ್ಟರೆ 16 ಪೈಸೆ ಮಾತ್ರ ಜನರಿಗೆ ತಲುಪುತ್ತಿತ್ತು. ನಾವು ಬರೀ ಭಾಷಣಕ್ಕೆ ಸೀಮಿತವಾಗಿರದೇ
ನಾವು 100ಕ್ಕೆ 100ರಷ್ಟು ಯೋಜನೆಯನ್ನು ಜನರಿಗೆ ತಲುಪಿಸುತ್ತೇವೆ. ಬರೀ ಭಾಷಣದಿಂದ ಭ್ರಷ್ಟಾಚಾರ ದೂರ ಮಾಡಲು ಸಾಧ್ಯವಿಲ್ಲ. ಜನಧನ್ ಮೂಲಕ 28ಲಕ್ಷ ಕೋಟಿ ಮಂದಿಗೆ ನೇರವಾಗಿ ಯೋಜನೆ ತಲುಪಿಸಿದ್ದೇವೆ ಎಂದು ಹೇಳಿದರು.
ರಾಜೀವ್ ಗಾಂಧಿ ಕಾಲದಲ್ಲಿ ಆಗಿದ್ದರೇ 28ಲಕ್ಷ ಕೋಟಿ ಬದಲು 5 ರಿಂದ 6 ಲಕ್ಷ ಕೋಟಿ ಮಾತ್ರ ಜನರಿಗೆ ತಲುಪುತಿತ್ತು. ಭಾರತವನ್ನು ಶಕ್ತಿಶಾಲಿ ಮಾಡಲು, ಭಾರತದ ಪ್ರತಿಯೊಬ್ಬರನ್ನು ಶಕ್ತಿಶಾಲಿ ಮಾಡಬೇಕು. ಕರ್ನಾಟಕದಲ್ಲಿ ಹೈವೇ, ಮೆಟ್ರೋ, ಏರ್ ಫೆÇೀರ್ಟ್ ಸೇರಿ ಹಲವು ಅಭಿವೃದ್ಧಿ ಕಾರ್ಯಗಳಾಗಿವೆ. 70 ವರ್ಷದಲ್ಲಿ 74 ಏರ್ ಪೆÇೀರ್ಟ್ ಆಗಿತ್ತು. 9 ವರ್ಷದಲ್ಲಿ ನಮ್ಮ ಕೆಲಸದಿಂದ 148 ಏರ್‍ಪೆÇೀರ್ಟ್ ಆಗಿವೆ.
ಇದು ಮೊದಲೇ ಆಗಿದ್ದರೆ ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶದ ಸಾಲಿನಲ್ಲಿ ನಿಲ್ಲುತಿತ್ತು. ಕೈಗಾರಿಕೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ಜನರನ್ನು ವಿಂಗಡಿಸಿ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ಬಿಜೆಪಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ನಾವು ಜಾತಿ ಧರ್ಮದ ಆಧಾರದಲ್ಲಿ ರಾಜಕೀಯ ಮಾಡುವುದಿಲ್ಲ. ಧರ್ಮದ ಆಧಾರದಲ್ಲಿ ಯಾವುದೇ ಮೀಸಲಾತಿ ಕೊಡಲು ಅವಕಾಶವಿಲ್ಲ. ಸಂವಿಧಾನವನ್ನು ನಿರ್ಲಕ್ಷ್ಯ ಮಾಡಿ, ಕಾಂಗ್ರೆಸ್ ಕೆಲಸ ಮಾಡಿದೆ ಎಂದು ತುರ್ತು ಪರಿಸ್ಥಿತಿ ಸ್ಮರಿಸಿದರು.
ಕಾಂಗ್ರೆಸ್ ಪಕ್ಷ ಹತಾಶವಾಗಿದೆ, ನಿರಾಶವಾಗಿದೆ. ಅದಕ್ಕಾಗಿಯೇ ಮೋದಿಯನ್ನು ವಿಷಸರ್ಪ ಎಂದು ಖರ್ಗೆ ಹೇಳಿದ್ದಾರೆ. ಪ್ರಧಾನಮಂತ್ರಿಯಲ್ಲಿ ವಿಷ ಇದೆಯಾ? ಕಾಂಗ್ರೆಸ್‍ನವರು ಈ ರೀತಿ ಮಾತನಾಡುತ್ತಿದ್ದಾರೆ. ಮೋದಿ ಅವರ ಜನಪ್ರಿಯತೆಯಿಂದ ಕಾಂಗ್ರೆಸ್‍ನವರು ಹತಾಶರಾಗಿದ್ದಾರೆ, ನಿರಾಶರಾಗಿದ್ದಾರೆ. ಮೋದಿಯ ಜನಪ್ರಿಯತೆ ಸಹಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಕೊಡುವಂತೆ ಈಶ್ವರನಲ್ಲಿ ಪ್ರಾರ್ಥನೆ ಮಾಡುತ್ತೇನೆ. ದೇಶದ ರಕ್ಷಣಾ ಮಂತ್ರಿಯಾಗಿ ಹೇಳುತ್ತೇನೆ. ಸೇನೆಯ ಸೈನಿಕರಿಗೆ ಮೊದಲು ಎಲ್ಲವನ್ನೂ ಬೇರೆ ದೇಶದಿಂದ ತೆಗೆದುಕೊಂಡು ಬಂದು ಕೊಡುತ್ತಿದ್ದೆವು. ಇದೀಗ ನಾವೇ ನಮ್ಮ ಭಾರತದಲ್ಲೇ ಎಲ್ಲವನ್ನೂ ತಯಾರಿಸಿ ಕೊಡುತ್ತಿದ್ದೇವೆ. ಅಷ್ಟೇ ಅಲ್ಲ ವಿದೇಶಕ್ಕೂ ರಫ್ತು ಮಾಡುತ್ತಿದ್ದೇವೆ. ಹೀಗೆ ಬಲಿಷ್ಠ ಭಾರತಕ್ಕೆ ಮತ್ತೊಮ್ಮೆ ಅವಕಾಶ ಕೊಡುವಂತೆ ಮನವಿ ಮಾಡಿದರು.
ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, 30 ವರ್ಷದಿಂದ ಕ್ಷೇತ್ರದೊಂದಿಗೆ ಸಂಬಂಧವಿದೆ. ನಾನಿಲ್ಲಿ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಬೇಕಿತ್ತು. ಆ ಸ್ಥಾನದಲ್ಲೀಗ ಶ್ರೀವತ್ಸ ಇದ್ದಾರೆ. ಅವರನ್ನು ಗೆಲ್ಲಿಸುವ ಮೂಲಕ ಡಬಲ್ ಇಂಜಿನ್ ಸರ್ಕಾರಕ್ಕೆ ಕೊಡುಗೆ ನೀಡಬೇಕು ಎಂದರು.