ಸಂಪೂರ್ಣ ಗುಣಮುಖ: ಆಸ್ಪತ್ರೆಯಿಂದ ಹೋಗಲು ತಯಾರಿಲ್ಲ ಜಿಲ್ಲಾಧಿಕಾರಿ ಸೋಂಕಿತರ ವರ್ತನೆಯ ಬಗ್ಗೆ ಅಸಮಾಧಾನ

ಚಾಮರಾಜನಗರ, ಮೇ.15- ಕೆಲವರು ಸಂಪೂರ್ಣ ಗುಣಮುಖರಾಗಿದ್ದರೂ ಆಸ್ಪತ್ರೆಯಿಂದ ಹೋಗಲು ತಯಾರಿಲ್ಲ, ಆಸ್ಪತ್ರೆಗೆ ಬಂದ ಕೂಡಲೇ ಅವಶ್ಯ ಇಲ್ಲದಿದ್ದರೂ ಆಕ್ಸಿಜನ್ ಬೇಕೆನ್ನುತ್ತಿದ್ದಾರೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ|| ಎಂ.ಆರ್. ರವಿ ಕೆಲ ಸೋಂಕಿತರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಗುಂಡ್ಲುಪೇಟೆ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಣಮುಖರಾದರೂ ಆಸ್ಪತ್ರೆಯಿಂದ ತೆರಳಲು ತಯಾರಿಲ್ಲದವರನ್ನು ಕೋವಿಡ್ ಕೇರ್ ಸೆಂಟರಿಗೆ ದಾಖಲಿಸಿ ಎಂದು ವೈದ್ಯರಿಗೆ ಸೂಚಿಸಿದ್ದೇನೆ. ತಾಲೂಕಿನಲ್ಲಿ 3 ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಒಟ್ಟು 525 ಹಾಸಿಗೆಗಳಿದ್ದು ಕೇವಲ 70 ಮಂದಿ ಮಾತ್ರ ಇದ್ದಾರೆ ಎಂದರು.
ಯಾರಿಗೆ ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯಲು ಸೌಲಭ್ಯವಿಲ್ಲವೊ ದಯವಿಟ್ಟು ಕೇರ್ ಸೆಂಟರಿಗೆ ಬರಬೇಕು. ವೈದ್ಯರು, ದಾದಿಯರ ನಿಗಾದಲ್ಲಿದ್ದು, ಅವಶ್ಯ ಬಿದ್ದಾಗ ತುರ್ತು ಸ್ಪಂದನೆ ಸಿಗಲಿದೆ ಎಂದು ಅವರು ಮನವಿ ಮಾಡಿದರು.
ಸೋಂಕಿತರ ಕೈಗೆ ಸೀಲ್ ಹಾಕಲಾಗುತ್ತಿದ್ದರೂ ಗ್ರಾಮೀಣ ಭಾಗದಲ್ಲಿ ಸೋಂಕಿತರು ಓಡಾಡುತ್ತಿರುವ ಆರೋಪ ಕೇಳಿಬರುತ್ತಿದ್ದು ಅವರ ಬೇಜವಾಬ್ದಾರಿ ತೋರುತ್ತದೆ. ಖಾಸಗಿ ಕ್ಲಿನಿಕ್‍ನವರು ಕೋವಿಡ್ ಲಕ್ಷಣಗಳಿರುವ ಯಾವುದೇ ಕಾಯಿಲೆಗೆ ಚಿಕಿತ್ಸೆ ಕೊಡಬಾರದು. ಖಾಸಗಿ ವೈದ್ಯರು ಆರಂಭದಲ್ಲಿ ಚಿಕಿತ್ಸೆ ಕೊಟ್ಟು ಪರಿಸ್ಥಿತಿ ಕೈಮೀರಿದ ಬಳಿಕ ಆಸ್ಪತ್ರೆಗೆ ಕಳುಹಿಸುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಹೈಕೋರ್ಟ್ ವರದಿ ಪ್ರತಿಕ್ರಿಯೆಗೆ ನಕಾರ :
ಆಕ್ಸಿಜನ್ ದುರಂತ ಸಂಬಂಧ ಜಿಲ್ಲಾಡಳಿತದ ವಿಫಲವಾಗಿರುವ ಕುರಿತು ನ್ಯಾಯಮೂರ್ತಿಗಳ ತನಿಖಾ ವರದಿಗೆ ಪ್ರತಿಕ್ರಿಯಿಸಿಲು ಡಿಸಿ ನಕಾರ ವ್ಯಕ್ತಪಡಿಸಿ, ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಏನೂ ಹೇಳುವುದಿಲ್ಲ ಎಂದರು.