ಸಂಪುಟ ಸರ್ಜರಿಗೆ ಮಮತಾ ಸಜ್ಜು

ಕೊಲ್ಕತ್ತಾ,ಆ.೩-ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಚಿವ ಸಂಪುಟ ಪುನಾರಚನೆಗೆ ಕೈಹಾಕಿದ್ದು ೨೦೧೧ ರಲ್ಲಿ ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ದೊಡ್ಡ ಸರ್ಜರಿ ಇದಾಗಿದೆ.

ಇಂದು ನಡೆಯಲಿರುವ ಸಂಪುಟ ಪುನರಚನೆಯಲ್ಲಿ ಬಿಜೆಪಿ ಬಿಟ್ಟು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಬಂದ ಬಾಬುಲ್ ಸುಪ್ರಿಯೋ, ಟಿಎಂಸಿ ನಾಯಕರಾದ ತಪಸ್ ರೇ, ಪಾರ್ಥ ಭೌಮಿಕ್, ಸ್ನೇಹಸಿಸ್ ಚಕ್ರವರ್ತಿ ಮತ್ತು ಉದಯನ್ ಗುಹಾ ಅವರು ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಸಚಿವ ಪಾರ್ಥ ಚಟರ್ಜಿಯ ಬಂಧನದ ಹಿನ್ನೆಲೆಯಲ್ಲಿ ಸಂಪುಟದಿಂದ ವಜಾ ಮಾಡಲಾಗಿದೆ.

ನಾಲ್ಕು-ಐದು ಮಂದಿ ಹೊಸ ಮುಖಗಳೂ ಸಂಪು ಸೇರಿಕೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ಹಾಲಿ ಸಂಪುಟ ವಿಸರ್ಜಿಸಿ ಹೊಸ ಸಂಪುಟ ರಚಿಸುವುದಿಲ್ಲ. ಆದರೆ ಕೆಲವು ಸಚಿವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಲಾಗುವುದು. ಕೆಲವು ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದಿದ್ದಾರೆ.

೭ ಹೊಸ ಜಿಲ್ಲೆ ರಚನೆ:

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ೭ ಹೊಸ ಜಿಲ್ಲೆಗಳನ್ನು ರಚಿಸಲು ಮುಂದಾಗಿದ್ದು ಸರ್ಕಾರದ ಹರಣವನ್ನು ಬೇರೆ ಕಡೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.