ಸಂಪುಟ ಸಭೆಯಲ್ಲಿ ಗ್ಯಾರಂಟಿ ಜಾರಿ ನಿರ್ಧಾರ

ಗ್ಯಾರಂಟಿ ಯೋಜನೆ ಜಾರಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಸಚಿವರ ಜೊತೆ ಸಭೆ ನಡೆಸಿದರು. ಸಚಿವರಾದ ಕೆ.ಎಚ್. ಮುನಿಯಪ್ಪ, ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ ಇದ್ದಾರೆ.

ಬೆಂಗಳೂರು, ಮೇ ೩೧- ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಎಲ್ಲ ಸಚಿವರುಗಳ ಜತೆ ಚರ್ಚೆ ನಡೆಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆಯ ಜಾರಿ ಬಗ್ಗೆ ತೀರ್ಮಾನ ಕೈಗೊಂಡು ಘೋಷಣೆ ಮಾಡಲಿದ್ದಾರೆ.
೫ ಗ್ಯಾರಂಟಿ ಯೋಜನೆಗಳನ್ನು ಒಂದೇ ಬಾರಿಗೆ ಅನುಷ್ಠಾನಗೊಳಿಸಬೇಕೇ ಅಥವಾ ಹಂತ ಹಂತವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬೇಕೆ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆದಿದ್ದು, ಮೊದಲ ಹಂತದಲ್ಲಿ ೨೦೦ ಯೂನಿಟ್ ಉಚಿತ ವಿದ್ಯುತ್‌ನ ಗೃಹಜ್ಯೋತಿ ಹಾಗೂ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ನಂತರ ದತ್ತಾಂಶಗಳನ್ನು ಸಂಗ್ರಹಿಸಿ ಉಳಿದ ಯೋಜನೆಗಳನ್ನು ಆಗಸ್ಟ್ ೧೫ ರಿಂದ ಜಾರಿ ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆದಿದ್ದು, ಮೊದಲಿಗೆ ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಗಳ ಅನುಷ್ಠಾನವಾಗಲಿವೆ ಎಂದು ಹೇಳಲಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭೆಯಲ್ಲಿ ಸಚಿವರುಗಳ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದಾರೆ.
ಅಂತಿಮವಾಗಿ ಸಚಿವ ಸಂಪುಟ ಸಭೆಯಲ್ಲಿ ಯಾವೆಲ್ಲಾ ಗ್ಯಾರಂಟಿ ಯೋಜನೆಗಳು ಯಾವಾಗ ಜಾರಿಯಾಗಲಿದೆ ಎಂಬುದು ತೀರ್ಮಾನವಾಗಲಿದೆ.
ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ್ದ ೫ ಗ್ಯಾರಂಟಿ ಯೋಜನೆಗಳ ಭರವಸೆ ಈಡೇರಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ೨ ದಿನಗಳಿಂದ ಅಧಿಕಾರಿಗಳ ಜತೆ ಸತತ ಸಭೆಗಳನ್ನು ನಡೆಸಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಂಬಂಧ ಆಗುವ ಆರ್ಥಿಕ ವೆಚ್ಚದ ವಿವರಗಳನ್ನು ಪಡೆದುಕೊಂಡಿದ್ದರು. ಹಾಗೆಯೇ ಯಾರಿಗೆಲ್ಲ ಗ್ಯಾರಂಟಿ ಯೋಜನೆಗಳನ್ನು ನೀಡಬೇಕು, ಇದಕ್ಕೆ ಷರತ್ತುಗಳನ್ನು ಹಾಕಬೇಕೆ ಎಂಬ ಬಗ್ಗೆಯೂ ಚರ್ಚೆ ನಡೆಸಿದ್ದರು.
ಅಧಿಕಾರಿಗಳ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಎಲ್ಲ ಸಚಿವರುಗಳ ಜತೆ ವಿಧಾನಸೌಧದಲ್ಲಿ ಗ್ಯಾರಂಟ್ ಯೋಜನೆ ಅನುಷ್ಠಾನ ಸಂಬಂಧ ನಿರ್ಣಾಯಕ ಸಭೆ ನಡೆಸಿದರು.
ಈ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಅದಕ್ಕೆ ತಗುಲುವ ವೆಚ್ಚ, ಯಾವ ಗ್ಯಾರಂಟಿ ಯೋಜನೆಗಳಿಗೆ ಷರತ್ತು ಹಾಕಬೇಕು, ಯಾವ ಗ್ಯಾರಂಟಿ ಯೋಜನೆಗಳನ್ನು ಬೇಷರತ್ತಾಗಿ ಜಾರಿ ಮಾಡಲಾಗುವುದು ಎಂಬ ಬಗ್ಗೆ ಚರ್ಚೆಗಳನ್ನು ನಡೆಸಿದರು.
ನಾಳೆ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಅಲ್ಲಿ ಗ್ಯಾರಂಟಿ ಯೋಜನೆಯ ಬಗ್ಗೆ ತೀರ್ಮಾನ ತೆಗೆದುಕೊಂಡು ನಾಳೆಯೇ ಗ್ಯಾರಂಟಿ ಯೋಜನೆಯ ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿಗಳು ಘೋಷಣೆ ಮಾಡುವರು ಎಂದು ಹೇಳಲಾಗಿದೆ.
ಇಂದಿನ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಎಲ್ಲ ಸದಸ್ಯರುಗಳು ಪಾಲ್ಗೊಂಡಿದ್ದರು.