ಸಂಪುಟ ವಿಸ್ತರಣೆ ಸಿಎಂ ಶೀಘ್ರ ದೆಹಲಿಗೆ

ಣ೧೫ಡಿ೨೦-s

ಬೆಂಗಳೂರು, ನ. ೧೫- ಸಚಿವ ಸಂಪುಟ ವಿಸ್ತರಣೆಗೆ ಒತ್ತಡಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ವರಿಷ್ಠರೊಡನೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರು ಇನ್ನು ೩ – ೪ ದಿನಗಳಲ್ಲಿ ದೆಹಲಿಗೆ ತೆರಳಲಿದ್ದಾರೆ.
ಉಪಚುನಾವಣಾ ಫಲಿತಾಂಶದ ನಂತರ ಮುಖ್ಯಮಂತ್ರಿಗಳು ದೀಪಾವಳಿಗೆ ಮುನ್ನವೇ ಸಂಪುಟ ವಿಸ್ತರಿಸಲು ಬಯಸಿ ದೆಹಲಿಗೆ ತೆರಳಲು ವರಿಷ್ಠರ ಬುಲಾವ್‌ಗೆ ಕಾದಿದ್ದರು.
ವರಿಷ್ಠ ನಾಯಕರು ಬಿಹಾರ ಸರ್ಕಾರ ರಚನೆಯ ಕಾರ್ಯದಲ್ಲಿ ಬ್ಯುಸಿಯಾದ್ದರಿಂದ ಮುಖ್ಯಮಂತ್ರಿಗಳ ದೆಹಲಿ ಭೇಟಿ ಸಾಧ್ಯವಾಗಿರಲಿಲ್ಲ. ಹಾಗಾಗಿ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿತ್ತು. ದೀಪಾವಳಿ ನಂತರವೇ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿದೆ.
ದೀಪಾವಳಿ ಹಬ್ಬ ಮುಗಿದ ನಂತರ ಗುರುವಾರ ಇಲ್ಲವೇ ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿಗೆ ತೆರಳಿ ವರಿಷ್ಠರೊಡನೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ಮುಹೂರ್ತ ನಿಗದಿ ಮಾಡಲಿದ್ದಾರೆ.
ಉಪಚುನಾವಣಾ ಫಲಿತಾಂಶದ ನಂತರ ಸಚಿವ ಸಂಪುಟ ವಿಸ್ತರಣೆಗೆ ಒತ್ತಡಗಳು ಹೆಚ್ಚಿದ್ದು, ಸಚಿವಾಕಾಂಕ್ಷಿ ಶಾಸಕರುಗಳು ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಕಳೆದ ವಾರ ಸಭೆ ನಡೆಸಿ ಶೀಘ್ರ ಸಂಪುಟ ವಿಸ್ತರಿಸುವಂತೆ ಒತ್ತಡ ಹೇರಿದ್ದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಬಿಜೆಪಿ ಸರ್ಕಾರ ರಚನೆಯ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಶಾಸಕ ಮುನಿರತ್ನ, ವಿಧಾನ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜು, ಆರ್. ಶಂಕರ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕಾಗಿರುವುದರಿಂದ ಆದಷ್ಟು ಶೀಘ್ರ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ತರಾತುರಿಯಲ್ಲಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಂಪುಟ ವಿಸ್ತರಣೆಯ ಆತುರ ಇದ್ದರೂ ವರಿಷ್ಠರು ಮಾತ್ರ ಈ ವಿಚಾರದಲ್ಲಿ ಸ್ವಲ್ಪ ನಿಧಾನಗತಿ ಅನುಸರಿಸುತ್ತಿದ್ದಾರೆ.
ಬಿಹಾರದಲ್ಲಿ ಸರ್ಕಾರ ರಚನೆಯಾಗಿ ನಿತೀಶ್‌ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ವರಿಷ್ಠರಿಗೆ ಬೇರೆ ರಾಜ್ಯಗಳ ವಿದ್ಯಮಾನಗಳ ಬಗ್ಗೆ ಗಮನಿಸುವ ಪುಱ್ಸೊತ್ತು ಇಲ್ಲ. ಹಾಗಾಗಿ ಸಂಪುಟ ವಿಸ್ತರಣೆ ಚರ್ಚೆ ಮುಂದಕ್ಕೆ ಹೋಗಿದೆ. ಈ ವಾರಾಂತ್ಯದೊಳಗೆ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಮುಖ್ಯಮಂತ್ರಿಗಳ ದೆಹಲಿ ಭೇಟಿ ಸಾಧ್ಯವಾದರೆ ಈ ತಿಂಗಳ ೨೦ ಇಲ್ಲವೇ ೨೧ ರಂದು ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುವ ಸಾಧ್ಯತೆ ಇದೆ.