ಸಂಪುಟ ವಿಸ್ತರಣೆ: ಸಿಎಂ ನಿರ್ಧಾರ ಅಂತಿಮ: ಸೋಮಣ್ಣ


ಹುಬ್ಬಳ್ಳಿ, ಜ 11: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿರ್ಧಾರವೇ ಅಂತಿಮ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ನಾಯಕರು. ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಅವರು ಏನೇ ನಿರ್ಧಾರ ತೆಗೆದುಕೊಂಡರೂ ಅದು ಅಂತಿಮ ಎಂದರು.
ಈ ವಿಷಯಕ್ಕೆ ಕೇಂದ್ರ ನಾಯಕರು ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಂತಿಮವಾಗಿ ನಿರ್ಧಾರಗಳನ್ನು ಈಗಾಗಲೇ ತೆಗೆದುಕೊಂಡಿದ್ದಾರೆ. ಅಲ್ಲದೆ ಸಂಪುಟ ವಿಸ್ತರಣೆ ದಿನಾಂಕವನ್ನು ಸಹ ನಿಗದಿ ಮಾಡಿದ್ದಾರೆ ಎಂದರು.
ಕೆಲ ಸಚಿವರನ್ನು ಸಂಪುಟದಿಂದ ಕೈಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಏನೂ ಮಾಹಿತಿ ಇಲ್ಲ ಎಂದರು.
ಇತ್ತೀಚೆಗೆ ಗ್ರಾಮ ಪಂಚಾಯತಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದ ಗ್ರಾಮಗಳ ಅಭಿವೃದ್ಧಿಯಾಗಬೇಕು. ಸರ್ಕಾರ ನೀಡಿದ ಅನುದಾನ ಸರಿಯಾಗಿ ಸದ್ಬಳಕೆಯಾಗಬೇಕು. ಸರ್ಕಾರ ನೀಡುವ ದುಡ್ಡು ಸಾರ್ವಜನಿಕರದ್ದು, ಸರಿಯಾದ ರೀತಿಯಲ್ಲಿ ಅದು ಅವರಿಗೆ ತಲುಪಬೇಕು. ಗ್ರಾಮ ಮಟ್ಟದಲ್ಲಿ ಬಡವರು ಹಾಗೂ ಅಬಲರ ಏಳ್ಗೆಯಾಗಬೇಕು ಎಂದು ಸೋಮಣ್ಣ ತಿಳಿಸಿದರು.