ಸಂಪುಟ ವಿಸ್ತರಣೆ ಸನ್ನಿಹಿತ ಮಂತ್ರಿಗಿರಿಗೆ ಭರ್ಜರಿ ಲಾಬಿ

ಬೆಂಗಳೂರು,ನ.೮- ರಾಜ್ಯ ಸಚಿವ ಸಂಪುಟ ವಿಸ್ತರಣೆ ಸನ್ನಿಹಿತವಾಗಿರುವಾಗಲೇ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಸಚಿವ ಸ್ಥಾನಕ್ಕಾಗಿ ಸಚಿವಾಕಾಂಕ್ಷಿ ಶಾಸಕರುಗಳ ಲಾಬಿ ಬಿರುಸಾಗಿದೆ.
ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಫಲಿತಾಂಶ ಇದೇ ತಿಂಗಳ ೧೦ ರಂದು ಹೊರ ಬಿದ್ದ ನಂತರ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ.
ಸಂಪುಟ ವಿಸ್ತರಣೆ ಸಂಬಂಧ ವರಿಷ್ಠರ ಜತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಇದೇ ತಿಂಗಳ ೧೧ ರಂದು ದೆಹಲಿಗೆ ತೆರಳುತ್ತಿರುವುದು ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರುವಂತಾಗಿದೆ. ಸಚಿವ ಪಟ್ಟಕ್ಕಾಗಿ ಬಿಜೆಪಿಯಲ್ಲಿ ಭಾರಿ ಪೈಪೋಟಿಯೇ ನಡೆದಿದೆ.
ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರುಗಳು ಪಕ್ಷದಲ್ಲಿನ ತಮ್ಮ ಗಾಡ್‌ಫಾದರ್‌ಗಳ ಮೂಲಕ ಸಚಿವ ಹುದ್ದೆ ಧಕ್ಕಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ.
ದೀಪಾವಳಿಗೂ ಮುನ್ನವೆ ಸಂಪುಟ ವಿಸ್ತರಣೆಯಾಗುವ ಸುಳಿವು ಇರುವುದರಿಂದ ಶಾಸಕರುಗಳು ಸಚಿವ ಸ್ಥಾನ ನೀಡುವಂತೆ ವರಿಷ್ಠರಲ್ಲಿ ಅಲವತ್ತುಕೊಂಡಿದ್ದಾರೆ.
ಸಚಿವ ಸ್ಥಾನ ಪಡೆಯಲು ಕೆಲ ಶಾಸಕರು ದೆಹಲಿಯಾತ್ರೆಗೂ ಮುಂದಾಗಿದ್ದಾರೆ. ವರಿಷ್ಠರು ನಿನ್ನೆಯವರೆಗೂ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರು. ಈಗ ಬಿಹಾರ ವಿಧಾನಸಭಾ ಚುನಾವಣೆಗಳು ಮುಗಿದಿರುವುದರಿಂದ ವರಿಷ್ಠರು ಬಿಡುವಾಗಿ ದೆಹಲಿಯಲ್ಲೇ ಇದ್ದಾರೆ. ಹಾಗಾಗಿ ಹಲವು ಸಚಿವಾಕಾಂಕ್ಷಿ ಶಾಸಕರುಗಳು ನಾಳೆ ಇಲ್ಲವೆ ನಾಡಿದ್ದು ದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.
ರಾಜ್ಯ ಸಚಿವ ಸಂಪುಟದಲ್ಲಿ ೬ ಸ್ಥಾನಗಳೂ ಖಾಲಿ ಇದ್ದು, ಈ ಪೈಕಿ ೫ ಸ್ಥಾನಗಳನ್ನು ಭರ್ತಿ ಮಾಡಿಕೊಂಡು ೧ ಸ್ಥಾನವನ್ನು ಖಾಲಿ ಬಿಡಲು ಮುಖ್ಯಮಂತ್ರಿ ಯಡಿಯೂರಪ್ಪ ಉದ್ದೇಶಿಸಿದ್ದಾರೆ.
ಹೈ ಕಮಾಂಡ್ ಜತೆ ಚರ್ಚಿಸಿದ ನಂತರವೇ ಎಷ್ಟು ಜನ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂಬುದು ಅಂತಿಮವಾಗಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಸಂಪುಟ ವಿಸ್ತರಣೆಯೋ ಪುನಾರಚನೆಯೋ ಎಂಬುದು ವರಿಷ್ಠರ ತೀರ್ಮಾನದ ಮೇಲೆ ನಿಂತಿದೆ. ವರಿಷ್ಠರು ಒಪ್ಪಿದರೆ ಮಾತ್ರ ೩-೪ ಸಚಿವರನ್ನು ಕೈಬಿಟ್ಟು ೭-೮ ಮಂದಿಯನ್ನು ಹೊಸದಾಗಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಬಯಸಿದ್ದಾರೆ.
ವರಿಷ್ಠರು ಪುನಾರಚನೆಗೆ ಒಪ್ಪದಿದ್ದರೆ ಸಂಪುಟ ವಿಸ್ತರಣೆಗಷ್ಟೆ ಸೀಮಿತವಾಗಲಿದೆ. ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಡಜನ್‌ಗೂ ಹೆಚ್ಚು ಶಾಸಕರುಗಳು ಲಾಬಿ ನಡೆಸಿದ್ದು, ಈ ಪೈಕಿ ವಿಧಾನ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್, ಆರ್. ಶಂಕರ್ ಉಪ ಚುನಾವಣೆಯಲ್ಲಿ ಗೆದ್ದರೆ ಮುನಿರತ್ನ ಅವರುಗಳಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ನಿಶ್ಚಿತ. ಇವರ ಜತೆಗೆ ಹಿರಿಯ ಶಾಸಕರಾದ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ ಇವರುಗಳಲ್ಲಿ ಒಬ್ಬರಿಗೆ ಸಚಿವ ಸ್ಥಾನದ ಅದೃಷ್ಟ ಖುಲಾಯಿಸಬಹುದು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ತಿಂಗಳ ೧೧ ರಂದು ದೆಹಲಿಗೆ ತೆರಳಿ ವರಿಷ್ಠರ ಜತೆ ಚರ್ಚಿಸಿದ ನಂತರವೇ ಯಾರಿಗೆ ಸಚಿವ ಸ್ಥಾನ ಸಿಗಲಿದೆ, ಎಷ್ಟು ಮಂದಿ ಸಚಿವರಾಗಲಿದ್ದಾರೆ ಎಂಬುದು ಗೊತ್ತಾಗಲಿದೆ.