ಸಂಪುಟ ವಿಸ್ತರಣೆ ಶೀಘ್ರ ನಿರ್ಧಾರ

ಬೆಂಗಳೂರು, ನ. ೨೦- ರಾಜ್ಯ ಸಚಿವ ಸಂಪುಟ ವಿಸ್ತರಣೆ ಇನ್ನು ೨ – ೩ ದಿನಗಳಲ್ಲಿ ಆಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪುನರುಚ್ಚರಿಸಿದರು.
ವಿಧಾನಸೌಧದಲ್ಲಿಂದು ನಡೆದ ಪೊಲೀಸ್ ಪದಕ ಪ್ರದಾನ ಸಮಾರಂಭದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ೨ – ೩ ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದರು.
ಸಂಪುಟ ವಿಸ್ತರಣೆ ಸಂಬಂಧ ೨ ದಿನಗಳ ಹಿಂದೆ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜೊತೆ ಚರ್ಚಿಸಿದ್ದೇನೆ. ಆದಷ್ಟು ಬೇಗ ಎಲ್ಲವೂ ಅಂತಿಮವಾಗಲಿದೆ ಎಂದರು.
ಭೇಟಿ ಸಮಾಲೋಚನೆ
ಸಂಪುಟ ವಿಸ್ತರಣೆ ವಿಳಂಬವಾಗಿರುವ ಬೆನ್ನಲ್ಲೇ ಸಚಿವ ಪಟ್ಟದ ಮೇಲೆ ಕಣ್ಣಿಟ್ಟಿರುವ ಶಾಸಕ ಉಮೇಶ್ ಕತ್ತಿ, ಇಂದು ಬೆಳ್ಳಂಬೆಳಿಗ್ಗೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಮಾಡಿ ಚರ್ಚೆ ನಡೆಸಿದರು.
ಈ ಭೇಟಿಯ ನಂತರ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಹ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಚರ್ಚಿಸಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ವರಿಷ್ಠರ ಸಂದೇಶವನ್ನು ಸಿ.ಟಿ. ರವಿ, ಮುಖ್ಯಮಂತ್ರಿಗಳಿಗೆ ತಲುಪಿಸಿದ್ದಾರೆ ಎನ್ನಲಾಗಿದೆ. ವರಿಷ್ಠರ ಸಂದೇಶದ ಗುಟ್ಟು ಇನ್ನೂ ರಟ್ಟಾಗಿಲ್ಲ.
ಸಿ.ಟಿ. ರವಿ ಈ ಬಗ್ಗೆ ಏನನ್ನೂ ಹೇಳದೆ, ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ, ಎಲ್ಲವೂ ಅವರ ವಿವೇಚನೆಗೆ ಬಿಟ್ಟದ್ದು ಎಂದರು.