ಸಂಪುಟ ವಿಸ್ತರಣೆ ವಿಳಂಬ

ಬೆಂಗಳೂರು ನ.18-ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ತಡವಾಗಲಿದೆ.


ಸಂಪುಟ ವಿಸ್ತರಣೆ ಅಥವಾ ಪುನಾರಚನೆಗಾಗಿ ಅನುಮತಿ ಪಡೆಯಲು ಹೈಕಮಾಂಡ್ ನಾಯಕರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ದೆಹಲಿಯಲ್ಲಿ ಭೇಟಿ ಮಾಡಿದ್ದರು ಪಕ್ಷದ ವರಿಷ್ಠರು ತಕ್ಷಣಕ್ಕೆ ಸಂಪುಟ ವಿಸ್ತರಣೆಗೆ ಅನುಮತಿ ನೀಡಿಲ್ಲ ಎರಡು ಮೂರು ದಿನ ಬಿಟ್ಟು ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದು ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗಲಿದೆ ಸಂಪುಟ ವಿಸ್ತರಣೆಗೆ ಪಕ್ಷದ ವರಿಷ್ಠರ ಅನುಮತಿ ನಿರೀಕ್ಷೆಯೊಂದಿಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿಯವರು ಬರಿಗೈಯಲ್ಲಿ ಇಂದು ರಾತ್ರಿಯೇ ನಗರಕ್ಕೆ ವಾಪಸ್ಸಾಗಿದ್ದಾರೆ.


ಸಚಿವ ಸಂಪುಟ ವಿಸ್ತರಣೆ ಸಂಬಂಧ ಇಂದು ದೆಹಲಿಗೆ ಆಗಮಿಸಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ, 20 ನಿಮಿಷಗಳ ಕಾಲ ಚರ್ಚೆ ನಡೆಸಿದರು. ಚರ್ಚೆಯ ವೇಳೆ ಸಿಎಂ ಬಿಎಸ್​ವೈ ಅವರು ನಡ್ಡಾ ಅವರಿಗೆ ಸಂಪುಟ ವಿಸ್ತರಣೆ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಜೊತೆಗೆ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಕೊಟ್ಟು ಬಂದಿದ್ದಾರೆ. ಹೈಕಮಾಂಡ್ ಇನ್ನು ಯಾವುದೇ ಅಂತಿಮ ತೀರ್ಮಾನವನ್ನು ತಿಳಿಸಿಲ್ಲ.

ರಾಷ್ಟ್ರೀಯ ಅಧ್ಯಕ್ಷರು ಬಿಎಸ್​ವೈ ಅವರ ಅಭಿಪ್ರಾಯ ಹಾಗೂ ಪಟ್ಟಿಯನ್ನು ಪಡೆದು, ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ನಾಳೆ ಅಥವಾ ನಾಳಿದ್ದು, ಹೈಕಮಾಂಡ್​ನಿಂದ ನಿರ್ದೇಶನ ಬಂದ ಬಳಿಕ ಸಿಎಂ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ.


ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಭೇಟಿಯ ನಂತರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್​ವೈ ಅವರು, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿ ತಿಳಿಸುವುದಾಗಿ ಹೇಳಿದ್ದಾರೆ. ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. . ಬೇರೆ ಯಾವ ನಾಯಕರನ್ನು ಭೇಟಿ ಮಾಡುತ್ತಿಲ್ಲ ಈಗ ನೇರವಾಗಿ ಬೆಂಗಳೂರಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.