ಸಂಪುಟ ವಿಸ್ತರಣೆ ವಾರಾಂತ್ಯಕ್ಕೆ ಬಿಎಸ್‌ವೈ ದೆಹಲಿಗೆ

ಬೆಂಗಳೂರು, ಆ. ೨- ಸ್ವಾತಂತ್ರ್ಯೋತ್ಸವಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆ ಮಾಡಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಸಂಬಂಧ ವರಿಷ್ಠ ನಾಯಕರೊಂದಿಗೆ ಚರ್ಚೆ ನಡೆಸಲು ಬರುವ ವಾರದ ಕೊನೆಯಲ್ಲಿ ದೆಹಲಿಗೆ ತೆರಳುವ ಸಾಧ್ಯತೆಗಳಿವೆ.
ಈ ತಿಂಗಳ 15 ರೊಳಗೆ ಅಂದರೆ ಸ್ವಾತಂತ್ರ್ಯೋತ್ಸವಕ್ಕೂ ಮುನ್ನ ಆ. 13 ಇಲ್ಲವೇ 14 ರಂದು ಸಂಪುಟ ವಿಸ್ತರಿಸಲು ಉದ್ದೇಶಿಸಿರುವ ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆಗೆ ವರಿಷ್ಠ ನಾಯಕರ ಅನುಮೋದನೆ ಪಡೆದು ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನು ಅಂತಿಮಗೊಳಿಸಲು ಬರುವ ಶನಿವಾರ ಇಲ್ಲವೇ ಭಾನುವಾರ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.
ಸಂಪುಟ ವಿಸ್ತರಣೆ ಸಂಬಂಧ ಈಗಾಗಲೇ ಕೇಂದ್ರದ ಕೆಲ ನಾಯಕರ ಜತೆ ದೂರವಾಣಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು, ಸಂಪುಟ ಪುನಾರಚನೆಗೆ ಒಲವು ತೋರಿದ್ದು, ನಾಲ್ಕೈದು ಸಚಿವರುಗಳನ್ನು ಕೈಬಿಟ್ಟು ಖಾಲಿ ಇರುವ 6 ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಹೊಸಬರನ್ನು ನೇಮಿಸಿಕೊಂಡು, 2 ಸಚಿವ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲು ತೀರ್ಮಾನಿಸಿದ್ದಾರೆ.
ಬಿಜೆಪಿ ಸರ್ಕಾರ ಬರಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆರ್. ಮುನಿರತ್ನ ಮತ್ತು ಮಸ್ಕಿಯ ಪ್ರತಾಪ್‌ಗೌಡ ಪಾಟೀಲ್ ಇವರುಗಳು ಪ್ರತಿನಿಧಿಸುವ ರಾಜರಾಜೇಶ್ವರಿ ನಗರ ಹಾಗ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳು ನಡೆಯದೆ ಕಾರಣ ಇವರಿಬ್ಬರಿಗಾಗಿಯೇ 2 ಸಚಿವ ಸ್ಥಾನಗಳನ್ನು ಖಾಲಿ ಇಡಲು ಯಡಿಯೂರಪ್ಪ ಬಯಸಿದ್ದಾರೆ ಎನ್ನಲಾಗಿದೆ.
ಅದರಂತೆ ಸಂಪುಟದಿಂದ ಕೈ ಬಿಡುವವರು ಹಾಗೂ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಾಗಿರುವವರ ಪಟ್ಟಿಯನ್ನು ಸಿದ್ದಗೊಳಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಅಂತಿಮವಾಗಿ ವರಿಷ್ಠರನ್ನು ಭೇಟಿ ಮಾಡಿ ಎಲ್ಲವನ್ನು ಫೈನಲ್ ಮಾಡಲಿದ್ದಾರೆ.
ಹಾಗಾಗಿ ಬರುವ ಶನಿವಾರ ಇಲ್ಲವೇ ಭಾನುವಾರ ದೆಹಲಿ ತೆರಳಿ ವರಿಷ್ಠರನ್ನು ಭೇಟಿ ಮಾಡುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ಕೇಂದ್ರದ ವರಿಷ್ಠ ನಾಯಕರುಗಳ ಭೇಟಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಸಮಯ ಕೇಳಿದ್ದು, ವರಿಷ್ಠರು ಭೇಟಿಗೆ ಸಮಯ ನೀಡಿದ ತಕ್ಷಣ ಅವರು ದೆಹಲಿಗೆ ತೆರಳಲಿದ್ದಾರೆ.
ಬಹುಶಃ ಶನಿವಾರ ಇಲ್ಲವೇ ಭಾನುವಾರ ವರಿಷ್ಠರನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಭೇಟಿಯಾಗುವರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬುದು ಸಹ ವರಿಷ್ಟರ ಭೇಟಿ ಸಂದರ್ಭದಲ್ಲೇ ಅಂತಿಮವಾಗಲಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪುಟ ವಿಸ್ತರಣೆಯ ಬದಲು ಪುನಾರಚನೆಗೆ ಪಟ್ಟು ಹಿಡಿಯುವ ಸಾಧ್ಯತೆ ಇದೆ.
ಈಗ ಸಚಿವ ಸಂಪುಟದಲ್ಲಿ ಖಾಲಿ ಇರುವ 6 ಸ್ಥಾನಗಳ ಪೈಕಿ 4 ಸ್ಥಾನಗಳನ್ನು ಭರ್ತಿ ಮಾಡಿ, ನಾಲ್ಕೈದು ಸಚಿವರನ್ನು ಕೈ ಬಿಟ್ಟು ಆ ಸ್ಥಾನಗಳಿಗೂ ಹಿರಿಯ ಶಾಸಕರನ್ನು ನೇಮಕ ಮಾಡಿ, ಜಾತಿ ಹಾಗೂ ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳಲು ಯಡಿಯೂರಪ್ಪ ನಿರ್ಧರಿಸಿದ್ದರಾದರೂ ಅಂತಿಮವಾಗಿ ಹೈಕಮಾಂಡ್‌ನ ಸೂಚನೆಯ ಮೇರೆಗೆ ಎಲ್ಲವೂ ಆಗಲಿದೆ.
ಹೈಕಮಾಂಡ್ ನಾಯಕರ ಭೇಟಿ ನಂತರವೇ ವಿಸ್ತರಣೆಯೋ, ಪುನಾರಚನೆಯೋ ಎಂಬುದು ಸ್ಪಷ್ಟವಾಗಲಿದೆ.
ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳಿಗೆ ಈಗಾಗಲೇ ಬಿಜೆಪಿಯ ಡಜನ್‌ಗೂ ಹೆಚ್ಚು ಶಾಸಕರು ಲಾಬಿ ನಡೆಸಿದ್ದು, ಪಕ್ಷದಲ್ಲಿ ತಮ್ಮ ಗಾಡ್ ಫಾದರ್‌ಗಳ ಮೂಲಕ ಒತ್ತಡ ಹೇರಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಹರ ಸಾಹಸ ನಡೆಸಿದ್ದಾರೆ.
ಬಿಜೆಪಿ ಸರ್ಕಾರ ಬರಲು ಕಾರಣರಾದ ಈಗ ವಿಧಾನ ಪರಿಷತ್ ಸದಸ್ಯರುಗಳಾಗಿರುವ ಆರ್. ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿದ್ದು, ಉಪಚುನಾವಣೆಯಲ್ಲಿ ಸೋತಿರುವ ಹೆಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ.
ಉಳಿದಂತೆ ಮೂಲ ಬಿಜೆಪಿಯಿಂದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಎಸ್.ಎ. ರಾಮದಾಸ್, ಅಪ್ಪಚ್ಚು ರಂಜನ್, ಬಸವನಗೌಡ ಪಾಟೀಲ್ ಯತ್ನಾಳ್, ತಿಪ್ಪಾರೆಡ್ಡಿ, ಚಂದ್ರಣ್ಣ, ಎಸ್.ಎಸ್. ಅಂಗಾರ, ಎಂ.ಪಿ. ಕುಮಾರಸ್ವಾಮಿ, ಎಸ್.ಆರ್. ವಿಶ್ವನಾಥ್, ಹಾಲಪ್ಪ ಆಚಾರ್, ಸುನೀಲ್‌ಕುಮಾರ್ ಇವರುಗಳು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.