ಸಂಪುಟ ವಿಸ್ತರಣೆ ವರಿಷ್ಠರಿಗೆ ತಲೆನೋವು

ಬೆಂಗಳೂರು, ನ. ೯- ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿದ್ದು ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ದೆಹಲಿ ಯಾತ್ರೆ ಕೈಗೊಂಡಿರುವ ಸಚಿವಾಕಾಂಕ್ಷಿ ಶಾಸಕರುಗಳು ವರಿಷ್ಠರ ಭೇಟಿಗೆ ಕಾದು ಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರುಗಳ ಲಾಬಿ ಬಿರುಸು ಗೊಂಡಿದೆ.
ನಾಳೆ ರಾಜರಾಜೇಶ್ವರಿ ನಗರ ಮತ್ತು ಸಿರಾ ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ದೀಪಾವಳಿ ಒಳಗೆ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ ಎಂಬ ಸುದ್ಧಿ ತಿಳಿಯುತ್ತಿದಂತೆಯೇ ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಭಾರಿ ಪೈಪೋಟಿ ನಡೆದಿದೆ.
ಒಂದೆಡೆ ಬಿಜೆಪಿ ಅಧಿಕಾರ ಸೂತ್ರ ಹಿಡಿಯಲು ಕಾರಣರಾದ ವಲಸಿಗ ಶಾಸಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರೆ ಮತ್ತೊಂದೆಡೆ ಮೂಲ ಬಿಜೆಪಿಗರು ಸಚಿವ ಸ್ಥಾನ ಪಡೆಯಲು ತಮ್ಮ ಗಾಡ್ ಫಾದರ್‌ಗಳ ಮೂಲಕ ನಡೆಸಿರುವ ಪ್ರಯತ್ನದಿಂದ ಪಕ್ಷದ ಹಿರಿಯ ನಾಯಕರಿಗೆ ತಲೆನೋವಾಗಿದೆ.
ಬಿಜೆಪಿ ಸರ್ಕಾರ ಬರಲು ಕಾರಣರಾದ ಶಾಸಕರುಗಳಿಗೆ ಸಚಿವ ಸ್ಥಾನ ನೀಡುವ ಅನಿವಾರ್ಯತೆ ಇದೆ ಹಾಗೆಯೇ ಮೂಲ ಬಿಜೆಪಿಯ ಹಿರಿಯ ಶಾಸಕರಿಗೂ ಸಚಿವ ಸ್ಥಾನ ನೀಡುವ ಸವಾಲು ಪಕ್ಷದ ನಾಯಕರ ಮುಂದಿದೆ. ಹಾಗಾಗಿ ಸಂಪುಟ ವಿಸ್ತರಣೆ ವಿಸ್ತರಣೆ ತಂತಿಯ ಮೇಲಿನ ನಡಿಗೆಯಂತಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಉಪಚುನಾವಣೆ ಫಲಿತಾಂಶದ ನಂತರ ಸಂಪುಟ ವಿಸ್ತರಣೆಯಾಗಲಿದೆ. ಈ ಸಂಬಂಧ ಈ ತಿಂಗಳ ೧೧ ಇಲ್ಲವೇ ೧೨ರಂದು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚೆ ನಡೆಸುತ್ತೇನೆ ಸಾಧ್ಯವಾದರೆ ದೀಪಾವಳಿಗೂ ಮುನ್ನವೇ ಸಂಪುಟ ವಿಸ್ತರಿಸುವೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳ ಈ ಹೇಳಿಕೆ ಬೆನ್ನಲ್ಲೇ ಸಚಿವಾಕಾಂಕ್ಷಿ ಶಾಸಕರುಗಳ ಲಾಬಿ ಬಿರುಸಾಗಿದ್ದು ಕೆಲ ಶಾಸಕರು ದೆಹಲಿ ಯಾತ್ರೆ ಕೈಗೊಂಡಿದ್ದಾರೆ
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಗಳಾಗಿರುವ ವಿಧಾನಪರಿಷತ್ತಿನ ಸದಸ್ಯರುಗಳಾದ ಎಚ್ ವಿಶ್ವನಾಥ್ ಆರ್ ಶಂಕರ್ ಈಗಾಗಲೇ ದೆಹಲಿಗೆ ತೆರಳಿದ್ದು ವರಿಷ್ಠರ ಭೇಟಿಗಾಗಿ ದೆಹಲಿಯಲ್ಲಿ ಕಾದುಕುಳಿತಿದ್ದಾರೆ ದೆಹಲಿಯಲ್ಲಿರುವ ಆರ್ ಶಂಕರ್ ಮತ್ತು ವಿಶ್ವನಾಥ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಭೇಟಿಗೆ ಸಮಯ ಕೇಳಿದ್ದು ಇಂದು ಇಲ್ಲವೇ ನಾಳೆ ಇವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಮಂಡಿಸಲಿದ್ದಾರೆ.
ಸಚಿವ ಸಿಟಿ ರವಿ ಅವರ ರಾಜೀನಾಮೆ ನಂತರ ರಾಜ್ಯ ಸಚಿವ ಸಂಪುಟದಲ್ಲಿ ಒಟ್ಟು ಏಳು ಸ್ಥಾನಗಳು ಖಾಲಿ ಇದ್ದು ಈ ಪೈಕಿ ಈ ಪೈಕಿ ೫ ಸ್ಥಾನಗಳನ್ನು ಭರ್ತಿಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಬಯಸಿದ್ದಾರೆ ದೆಹಲಿಗೆ ತೆರಳಿ ವರಿಷ್ಠರೊಡನೆ ಚರ್ಚಿಸಿದ ನಂತರವೇ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ ಹಾಗೆಯೇ ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಯಾರನ್ನ ಕೈಬಿಡಬೇಕು ಎಲ್ಲವೂ ಮುಖ್ಯಮಂತ್ರಿಗಳ ದೆಹಲಿ ಭೇಟಿ ಸಂದರ್ಭದಲ್ಲಿ ತೀರ್ಮಾನವಾಗಲಿದೆ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳಿಗೆ ಬಿಜೆಪಿಯಲ್ಲಿ ಒಂದು ಡಜನ್ ಗೂ ಹೆಚ್ಚು ಆಕಾಂಕ್ಷಿಗಳಿದ್ದು ಹಿರಿಯ ಶಾಸಕರಾದ ಉಮೇಶ್ ಕತ್ತಿ ಅರವಿಂದ ಲಿಂಬಾವಳಿ ಮುರುಗೇಶ್ ನಿರಾಣಿ ತಿಪ್ಪಾರೆಡ್ಡಿ ಸುನಿಲ್ ಕುಮಾರ್ ಬಸನಗೌಡ ಪಾಟೀಲ್ ಯತ್ನಾಳ ಹಾಲಾಡಿ ಶ್ರೀನಿವಾಸ ಶೆಟ್ಟಿ ಎಂಟಿಬಿ ನಾಗರಾಜ್ ನರಸಿಂಹನಾಯಕ ರಾಮದಾಸ್ ಪ್ರೀತಂ ಗೌಡ ಸೇರಿದಂತೆ ಹಲವರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಇವರ ಜೊತೆಗೆ ರಾಜರಾಜೇಶ್ವರಿನಗರ ಉಪಚುನಾವಣೆಯಲ್ಲಿ ಮುನಿರತ್ನ ಗೆಲುವು ಸಾಧಿಸಿದರೆ ಅವರು ಸಹ ಸಚಿವ ಸ್ಥಾನಕ್ಕಾಗಿ ಸ್ಥಾನದ ರೇಸ್‌ನಲ್ಲಿ ಸೇರ್ಪಡೆಯಾಗುವರು
ಹಾಗಾಗಿ ಯಾರಿಗೆ ಸಚಿವ ಪಟ್ಟ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ