ಸಂಪುಟ ವಿಸ್ತರಣೆ ಮತ್ತೇ ವಿಳಂಬ

ಬೆಂಗಳೂರು, ನ. ೧೨- ಬಹುದಿನಗಳ ನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ದೀಪಾವಳಿಗೂ ಮುನ್ನವೇ ಸಂಪುಟ ವಿಸ್ತರಣೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ,
ಹೇಳಲಾಗಿತ್ತಾದರೂ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ ಹೋಗುವುದು ನಿಶ್ಚಿತವಾಗಿದ್ದು, ದೀಪಾವಳಿ ನಂತರವೇ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯಾಗಲಿದೆ.
ವಿಧಾನಸಭೆಯ ಉಪಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದ
ಬೆನ್ನಲ್ಲೆ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಪುನಾರಚಿಸಲು ಬಯಸಿ, ಈ ಸಂಬಂಧ ವರಿಷ್ಠರೊಂದಿಗೆ ಚರ್ಚಿಸಲು ದೆಹಲಿಗೆ ತೆರಳಲು ಸಿದ್ದತೆ ನಡೆಸಿದ್ದರು.
ಪಕ್ಷದ ವರಿಷ್ಠರು ಬಿಹಾರದ ಸರ್ಕಾರ ರಚನೆಯ ಪ್ರಕ್ರಿಯೆಗಳಲ್ಲಿ ತೊಡಗಿಕೊಂಡಿರುವುದರಿಂದ ಮುಖ್ಯಮಂತ್ರಿಗಳ ದೆಹಲಿ ಭೇಟಿ ಮುಂದಕ್ಕೆ ಹೋಗಿದೆ.
ಎಲ್ಲವೂ ಅಂದುಕೊಂಡಂತಾಗಿದ್ದರೆ ಮುಖ್ಯಮಂತ್ರಿ ಬಿ.ಎಸ್.ವೈ ನಿನ್ನೆ ದೆಹಲಿಗೆ ತೆರಳಿ ವರಿಷ್ಠರೊಡನೆ ಸಮಾಲೋಚಿಸಿ ದೀಪಾವಳಿಗೆ ಮುನ್ನವೇ ಸಂಪುಟ ವಿಸ್ತರಣೆ ಮಾಡಲು ನಿರ್ಧರಿಸಿದ್ದರು.
ವರಿಷ್ಠರು ಬಿಹಾರದ ರಾಜಕೀಯ ವಿದ್ಯಮಾನಗಳಲ್ಲಿ ಬ್ಯುಸಿಯಾಗಿರುವುದರಿಂದ ಮುಖ್ಯಮಂತ್ರಿ ದೆಹಲಿ ಭೇಟಿ ಮುಂದಕ್ಕೆ ಹೋಗಿದೆ.
ದೀಪಾವಳಿ ನಂತರವೇ ಮುಖ್ಯಮಂತ್ರಿಗಳು ದೆಹಲಿಗೆ ತೆರಳಲಿರುವುದರಿಂದ ಸಂಪುಟ ವಿಸ್ತರಣೆ ಸಹ ತಡವಾಗಲಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ನಾಲ್ಕೈದು ಸಚಿವರನ್ನು ಕೈ ಬಿಟ್ಟು ಏಳೆಂಟು ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಸಂಪುಟ ಪುನಾರಚಿಸಲು ಬಯಸಿದ್ದಾರೆ. ಆದರೆ ಇದಕ್ಕೆ ವರಿಷ್ಠರ ಅನುಮತಿ ಅವಶ್ಯ. ವರಿಷ್ಠರು ಒಪ್ಪಿದರೆ ಮಾತ್ರ ಸಂಪುಟ ಪುನಾರಚನೆಯಾಗಲಿದೆ. ಇಲ್ಲವೇ ನಾಲ್ಕೈದು ಮಂದಿಯನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಸಂಪುಟ ವಿಸ್ತರಣೆಗಷ್ಟೆ ಸೀಮಿತವಾಗಲಿದೆ.
ರಾಜ್ಯ ಸಚಿವ ಸಂಪುಟದಲ್ಲಿ ೭ ಸ್ಥಾನಗಳು ಖಾಲಿಯಿದ್ದು, ಈ ಸ್ಥಾನಗಳಿಗೆ ಒಂದು ಡಜನ್‌ಗೂ ಹೆಚ್ಚು ಶಾಸಕರು ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಸಚಿವಾಕಾಂಕ್ಷಿ ಶಾಸಕರುಗಳು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿ ಸಭೆ-ಸಮಾಲೋಚನೆಗಳನ್ನು ನಡೆಸುವ ಮೂಲಕ ಸಚಿವ ಪಟ್ಟಕ್ಕಾಗಿ ನಾಯಕರುಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ನಿಶ್ಚಿತವಾಗುತ್ತಿದ್ದಂತೆಯೇ ನಿನ್ನೆ ಏಳೆಂಟು ಶಾಸಕರುಗಳು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ ನಂತರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಈ ಹಿಂದೆ ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ನೀಡಿದ್ದ ಮಾತಿನಂತೆ ವಿಧಾನ ಪರಿಷತ್ ಸದಸ್ಯರಾದ ಆರ್. ಶಂಕರ್, ಎಂಟಿಬಿ ನಾಗರಾಜು ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವುದು ನಿಶ್ಚಿತ. ಉಳಿದಂತೆ ಮೂಲ ಬಿಜೆಪಿಯಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಹಿರಿಯ ಶಾಸಕರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ ಅವರಿಗೆ ಸಚಿವ ಪಟ್ಟದ ಅದೃಷ್ಟ ಖುಲಾಯಿಸಬಹುದು ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿಗೆ ತೆರಳಿ ವರಿಷ್ಠರೊಡನೆ ಚರ್ಚಿಸಿದ ನಂತರವೇ ಯಾರು ಸಚಿವರಾಗಲಿದ್ದಾರೆ, ಸಂಪುಟ ಪುನರಚನೆಯೋ, ವಿಸ್ತರಣೆಯೋ ಎಲ್ಲವೂ ತೀರ್ಮಾನವಾಗಲಿದೆ.