ಸಂಪುಟ ವಿಸ್ತರಣೆ ಮತ್ತೆ ಮುನ್ನೆಲೆಗೆ

ಬೆಂಗಳೂರು,ಜು.೨೨- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದೆಹಲಿಗೆ ತೆರಳಿದ್ದು, ಸಚಿವ ಸಂಪುಟ ವಿಸ್ತರಣೆ ಮತ್ತೆ ಮುನ್ನೆಲೆಗೆ ಬಂದಿದೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ರಾಷ್ಟ್ರಪತಿ ರಾಮ್‌ನಾಥ್‌ಕೋವಿಂದ್ ಅವರಿಗೆ ಬೀಳ್ಕೊಡುಗೆಯ ಔತಣಕೂಟವನ್ನು ಇಂದು ರಾತ್ರಿ ಆಯೋಜಿಸಿದ್ದು, ಈ ಔತಣಕೂಟದಲ್ಲಿ ಭಾಗಿಯಾಗಲು ಸಚಿವ ಸಂಪುಟ ಸಭೆಯನ್ನು ಮುಗಿಸಿಕೊಂಡು ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದರು.
ಮುಖ್ಯಮಂತ್ರಿಗಳ ದೆಹಲಿ ಭೇಟಿ ಬೆನ್ನಲ್ಲೆ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಸಚಿವಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುವ ಚರ್ಚೆಗಳು ನಡೆದಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದೆಹಲಿ ಭೇಟಿ ಸಂದರ್ಭದಲ್ಲಿ ವರಿಷ್ಠರನ್ನು ಭೇಟಿಯಾಗುವ ಸಾಧ್ಯತೆಗಳಿದ್ದು, ವರಿಷ್ಠರ ಭೇಟಿ ಸಂದರ್ಭದಲ್ಲಿ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳಿಗೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳ ನೇಮಕಾತಿ ಬಗ್ಗೆ ಚರ್ಚಿಸಿ ಒಪ್ಪಿಗೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.ಮುಖ್ಯಮಂತ್ರಿಗಳ ದೆಹಲಿ ಭೇಟಿ ಸಚಿವಾಕಾಂಕ್ಷಿ ಶಾಸಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದು, ಈ ಬಾರಿ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ನೀಡಲಿದೆ ಎಂಬ ವಿಶ್ವಾಸವನ್ನು ಶಾಸಕರು ಹೊಂದಿದ್ದಾರೆ.
ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನಷ್ಟೇ ತುಂಬಿ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿಗಳು ಬಯಸಿದ್ದು, ಸಂಪುಟ ಪುನಾರಚನೆ ಇಲ್ಲ ಎನ್ನಲಾಗಿದೆ. ಸಂಪುಟದಲ್ಲಿ ಖಾಲಿ ಇರುವ ೫ ಸ್ಥಾನಗಳಿಗೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳು ಇಂದು ಪಕ್ಷದ ವರಿಷ್ಠರಾದ ಜೆ.ಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್‌ಶಾ ಜತೆ ಚರ್ಚೆ ನಡೆಸುವರು ಎಂದು ಹೇಳಲಾಗಿದೆ.
ಚುನಾವಣೆಗೆ ಇನ್ನೂ ೮ ತಿಂಗಳು ಬಾಕಿ ಇರುವುದರಿಂದ ಸಂಪುಟ ಪುನಾರಚನೆ ಮಾಡದೆ ಖಾಲಿ ಸ್ಥಾನಗಳಷ್ಟೇ ತುಂಬಿ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುವ ಬಗ್ಗೆಯೂ ಮುಖ್ಯಮಂತ್ರಿಗಳು ವರಿಷ್ಠರ ಜತೆ ಚರ್ಚಿಸುವರು.ಮುಖ್ಯಮಂತ್ರಿಗಳ ದೆಹಲಿ ಭೇಟಿ ಬೆನ್ನಲ್ಲೆ ಹಲವು ಸಚಿವಾಕಾಂಕ್ಷಿ ಶಾಸಕರೂ ಸಹ ದೆಹಲಿಗೆ ತೆರಳಿ ದೆಹಲಿಯಲ್ಲಿರುವ ತಮ್ಮ ಗಾಡ್‌ಫಾದರ್‌ಗಳ ಮೂಲಕ ಸಚಿವ ಸ್ಥಾನ ಗಿಟ್ಟಿಸಲು ಲಾಬಿ ನಡೆಸಿದ್ದಾರೆ.
ಒಂದು ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ವರಿಷ್ಠರ ಭೇಟಿ ಸಾಧ್ಯವಾಗದಿದ್ದರೆ ಮತ್ತೆ ಜು. ೨೪ಕ್ಕೆ ದೆಹಲಿಗೆ ತೆರಳಿ, ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವರು ಎನ್ನಲಾಗಿದೆ.ಈ ತಿಂಗಳಾಂತ್ಯದೊಳಗೆ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ನೇಮಕಾತಿ ಪ್ರಕ್ರಿಯೆ ಎಲ್ಲವೂ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳ ಆಪ್ತ ಮೂಲಗಳು ತಿಳಿಸಿವೆ.