ಸಂಪುಟ ವಿಸ್ತರಣೆ : ಬಿಎಸ್‌ವೈಗೆ ನುಂಗಲಾರದ ತುತ್ತು

ಬೆಂಗಳೂರು, ನ. ೨೧- ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ವರಿಷ್ಠರು ಇನ್ನೆರಡು ಮೂರು ದಿನಗಳಲ್ಲಿ ಹಸಿರು ನಿಶಾನೆ ತೋರದಿದ್ದರೆ ಸಂಪುಟ ವಿಸ್ತರಣೆ ತಡವಾಗುವುದು ಬಹುತೇಕ ನಿಶ್ಚಿತ.
ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ೨-೩ ದಿನಗಳಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದ್ದು, ಈ ವೇಳಾಪಟ್ಟಿ ಪ್ರಕಟಣೆಯ ಒಳಗೆ ಸಂಪುಟ ವಿಸ್ತರಣೆಯಾಗಬೇಕಾಗುತ್ತದೆ. ಒಂದು ವೇಳೆ ಇನ್ನೆರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆಯಾಗದಿದ್ದರೆ ಉಪಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆ ಸಾಧ್ಯವಿಲ್ಲ. ಹಾಗಾಗಿ ಸಂಪುಟ ವಿಸ್ತರಣೆ ೨-೩ ತಿಂಗಳು ತಡವಾದರೂ ಅಚ್ಚರಿ ಪಡಬೇಕಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪುಟ ವಿಸ್ತರಿಸಲು ಬಯಸಿ ಈಗಾಗಲೇ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡುವಂತೆ ಹೇಳಿ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಕೊಟ್ಟು ಬಂದಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇನ್ನು ಮೂಱ್ನಾಲ್ಕು ದಿನಗಳಲ್ಲಿ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಂಡು ಅನುಮತಿ ನೀಡುವುದಾಗಿ ಹೇಳಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಂಪುಟ ವಿಸ್ತರಣೆಗೆ ಅನುಮತಿ ನೀಡಲು ವರಿಷ್ಠರು ಮೀನಾಮೇಷ ಎಣಿಸುತ್ತಿದ್ದಾರೆ.
ಇನ್ನೆರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆಯಾದರೆ ವಿಸ್ತರಣೆಯಾದಂತೆ ಇಲ್ಲದಿದ್ದರೆ ಕನಿಷ್ಠ ೨ ತಿಂಗಳು ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಲಿದೆ.
ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರ, ಕಾಂಗ್ರೆಸ್‌ನ ಶಾಸಕರಾಗಿದ್ದ ಬಿ. ನಾರಾಯಣರಾವ್ ರವರ ನಿಧನದಿಂದ ತೆರವಾಗಿರುವ ಬೀದರ್‌ನ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಮತ್ತು ಪ್ರತಾಪ್‌ಗೌಡ ಪಾಟೀಲ್ ರಾಜೀನಾಮೆಯಿಂದ ತೆರವಾಗಿರುವ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಬಾಕಿ ಇದೆ.
ಈ ಮೂರೂ ಕ್ಷೇತ್ರಗಳಿಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಕೇಂದ್ರ ಚುನಾವಣಾ ಆಯೋಗ ಇನ್ನೆರಡು ಮೂರು ದಿನಗಳಲ್ಲಿ ಉಪಚುನಾವಣೆಯ ದಿನಾಂಕ ನಿಗದಿ ಮಾಡುವ ಸಾಧ್ಯತೆಗಳು ಹೆಚ್ಚಿವೆ.
ಈ ಎಲ್ಲ ಕಾರಣದಿಂದ ಸಂಪುಟ ವಿಸ್ತರಣೆ ಮತ್ತೆ ನೆನೆಗುದಿಗೆ ಬೀಳುವ ಸಾಧ್ಯತೆಯೇ ಹೆಚ್ಚಿದೆ.
ಸಮ್ಮಿಶ್ರ ಸರ್ಕಾರ ಪತನವಾದ ನಂತರ ಮುಖ್ಯಮಂತ್ರಿ ಯಡಿಯೂರಪ್ಪನವರು ತಾವು ನೀಡಿದ್ದ ವಾಗ್ದಾನದಂತೆ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಗೆದ್ದಿರುವ ಮುನಿರತ್ನ, ಉಪಚುನಾವಣೆಯಲ್ಲಿ ಸೋತರೂ ವಿಧಾನಸಭಾ ಸದಸ್ಯರಾಗಿರುವ ಎಂಟಿಬಿ ನಾಗರಾಜು, ಹೆಚ್. ವಿಶ್ವನಾಥ್ ಮತ್ತು ಆರ್. ಶಂಕರ್ ಇವರುಗಳನ್ನು ಕೊಟ್ಟ ಮಾತನಂತೆ ಸಚಿವರನ್ನಾಗಿಸುವ ಅನಿವಾರ್ಯತೆ ಇದೆ. ಹಾಗಾಗಿಯೇ ಯಡಿಯೂರಪ್ಪನವರು ಆದಷ್ಟು ಬೇಗ ಸಂಪುಟ ವಿಸ್ತರಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ತವಕದಲ್ಲಿದ್ದಾರೆ. ಆದರೆ ಏಕೋ ಏನೋ ಬಿಜೆಪಿ ವರಿಷ್ಠರು ಮಾತ್ರ ಸಂಪುಟ ವಿಸ್ತರಣೆಗೆ ಆಸಕ್ತಿ ತೋರುತ್ತಿಲ್ಲ.
ಸಂಪುಟ ವಿಸ್ತರಣೆ ಮಾತು ಬಂದಾಗಲೆಲ್ಲಾ ವರಿಷ್ಠರು ಅಡ್ಡಗೋಡೆ ಮೇಲೆ ದೀಪಇಟ್ಟಂತೆ ಮಾತನಾಡುತ್ತಾ ಸಂಪುಟ ವಿಸ್ತರಣೆಗೆ ಹಸಿರುನಿಶಾನೆ ತೋರುವ ಮನಸ್ಸನ್ನು ಮಾಡುತ್ತಿಲ್ಲ.
ವರಿಷ್ಠರ ಈ ನಡೆಗೆ ಕಾರಣ ಏನೆಂಬುದು ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕರಾದ ಆಡಳಿತ ವೈಖರಿ ಅದರಲ್ಲೂ ಅವರ ಪುತ್ರ ವಿಜಯೇಂದ್ರ ರವರ ಹಸ್ತಕ್ಷೇಪ ವರಿಷ್ಠರ ಈ ವರ್ತನೆಗೆ ಕಾರಣ ಎಂದು ಹೇಳಲಾಗುತ್ತಿದ್ದರೂ ಯಾವುದರ ಬಗ್ಗೆಯೂ ಸರಿಯಾದ ಸ್ಪಷ್ಟತೆ ಇಲ್ಲ.
ರಾಜ್ಯ ಬಿಜೆಪಿ ಮುಖಂಡರಿಗೂ ವರಿಷ್ಠರ ಈ ವರ್ತನೆ ಒಂದು ರೀತಿ ಮುಜುಗರ ತಂದಿದೆ. ಒಂದೆಡೆ ಕೊಟ್ಟ ಮಾತು ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಸಿಲುಕಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ವರಿಷ್ಠರ ನಡೆಯಿಂದ ಬೇಸರಗೊಂಡಿರುವುದಂತೂ ನಿಜ. ಆದರೂ ಏನೂ ಮಾಡಲಾಗದಂತ ಪರಿಸ್ಥಿತಿಯಲ್ಲಿ ಅವರಿದ್ದಾರೆ ಎಂದರೆತಪ್ಪೇನಿಲ್ಲ.
ಜಾರಕಿಹೊಳಿ ಲಾಬಿ
ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿಗೆ ತೆರಳಿದ್ದಾಗಲೇ ಪ್ರತ್ಯೇಕವಾಗಿ ದೆಹಲಿಗೆ ತೆರಳಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಹ ಸಂಪುಟ ವಿಸ್ತರಣೆಗ ವರಿಷ್ಠರ ಮಟ್ಟದಲ್ಲಿ ಲಾಬಿ ನಡೆಸಿದ್ದು ಕಳೆದ ಮೂರು ದಿನಗಳಿಂದ ಅವರು ದೆಹಲಿಯಲ್ಲೇ ಮೊಕ್ಕಾಂ ಹೂಡಿ ತಮ್ಮ ಆಪ್ತರಿಗೆ ಸಚಿವ ಪಟ್ಟ ಕೊಡಿಸಲು ಲಾಬಿ ನಡೆಸಿದ್ದಾರೆ.
ಸರ್ಕಾರ ರಚನೆ ಸಂದರ್ಭದಲ್ಲಿ ತಮ್ಮ ಜತೆ ಬಂದ ಎಂಟಿಬಿ ನಾಗರಾಜು, ಆರ್. ಶಂಕರ್, ಹೆಚ್. ವಿಶ್ವನಾಥ್ ಮತ್ತು ಮುನಿರತ್ನ ಅವರಿಗೆ ಸಚಿವ ಸ್ಥಾನ ಕೊಡಿಸಲು ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿದಂತೆ ಹಲವು ವರಿಷ್ಠ ನಾಯಕರನ್ನು ಭೇಟಿ ಮಾಡಿ ಒತ್ತಡ ಹೇರಿದ್ದಾರೆ.
ಇಷ್ಟಾದರೂ ವರಿಷ್ಠರು ಸಂಪುಟ ವಿಸ್ತರಣೆಗೆ ಮನಸ್ಸು ಮಾಡದಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಸಂಪುಟ ವಿಸ್ತರಣೆ ಯಾವಾಗ ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ.