ಸಂಪುಟ ವಿಸ್ತರಣೆ ದೆಹಲಿ ನಾಯಕರ ಜತೆ ಚರ್ಚೆ: ಸಿಎಂ

ಬೆಂಗಳೂರು, ಜ. ೧೦- ಸಚಿವ ಸಂಪುಟ ವಿಸ್ತರಣೆ, ಮುಂಬರುವ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಇಂದು ದೆಹಲಿಯಲ್ಲಿ ವರಿಷ್ಠರೊಂದಿಗೆ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ವರಿಷ್ಠರ ಬುಲಾವ್ ಮೇರೆಗೆ ಇಂದು ಬೆಳಿಗ್ಗೆ ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಬೆಳಗಾವಿ ಲೋಕಸಭಾ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ವರಿಷ್ಠರೊಂದಿಗೆ ಚರ್ಚಿಸಲು ದೆಹಲಿಗೆ ಹೋಗುತ್ತಿರುವುದಾಗಿ ಹೇಳಿದರು.
ವರಿಷ್ಠರ ಭೇಟಿ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆ ನಡೆಸುತ್ತೇನೆ ಎಂದು ಅವರು ತಿಳಿಸಿದರು.
ಇಂದೇ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆಯೇ ಎಂಬ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಅವರು ಅದು ನನಗೆ ಗೊತ್ತಿಲ್ಲ, ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಡನೆ ಚರ್ಚೆ ಮಾತ್ರ ನಡೆಸುವೆ ಎಂದಷ್ಟೇ ಹೇಳಿದರು.
ಸಂಪುಟ ವಿಸ್ತರಣೆ ಯಾವಾಗ ಆಗಲಿದೆ ಎಂಬ ಪ್ರಶ್ನೆಗೂ ಮುಖ್ಯಮಂತ್ರಿಗಳು ಸ್ಪಷ್ಟ ಉತ್ತರ ನೀಡಲಿಲ್ಲ. ವರಿಷ್ಠರೊಡನೆ ಚರ್ಚಿಸಿದ ನಂತರವೇ ಎಲ್ಲವೂ ಅಂತಿಮವಾಗಲಿದೆ ಎಂದು ಚುಟುಕು ಉತ್ತರ ನೀಡಿದರು.
ಇತ್ತೀಚಿನ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ವಿಜಯದ ಬಗ್ಗೆಯೂ ವರಿಷ್ಠರಿಗೆ ಮಾಹಿತಿ ನೀಡುವುದಾಗಿ ಅವರು ಹೇಳಿದರು.
ಕೇಂದ್ರ ಚುನಾವಣಾ ಆಯೋಗ ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಶೀಘ್ರದಲ್ಲೇ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಈ ಕ್ಷೇತ್ರಗಳಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿಸಬೇಕು ಎಂಬ ಬಗ್ಗೆಯೂ ವರಿಷ್ಠರೊಂದಿಗೆ ಚರ್ಚಿಸುವುದಾಗಿ ಅವರು ಹೇಳಿ, ವರಿಷ್ಠರ ಭೇಟಿ ನಂತರ ಇಂದು ರಾತ್ರಿಯೇ ನಗರಕ್ಕೆ ವಾಪಸ್ಸಾಗುತ್ತೇನೆ ಎಂದರು.