ಸಂಪುಟ ವಿಸ್ತರಣೆಯಿಂದ ಬಿಜೆಪಿಯಲ್ಲಿ ಬಂಡಾಯ ಸ್ಫೋಟ: ಡಾ. ಅಜಯಸಿಂಗ್

ಕಲಬುರಗಿ.ಜ.13: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆಯಿಂದಾಗಿ ಬಿಜೆಪಿಯಲ್ಲಿ ಬಂಡಾಯ ಸ್ಫೋಟಗೊಂಡಿದೆ ಎಂದು ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಅಜಯಸಿಂಗ್ ಅವರು ಹೇಳಿದರು.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿಐ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ನೇತೃತ್ವದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇದೆ ಎನ್ನುವ ಬಿಜೆಪಿ ನಾಯಕರಿಗೆ ತಮ್ಮ ಪಕ್ಷದಲ್ಲಿ ಎಷ್ಟು ಗುಂಪುಗಳಿವೆ ಎಂಬುದನ್ನು ಲೆಕ್ಕ ಹಾಕಲಿ ಎಂದರು.
ಈಗಾಗಲೇ ಸಚಿವ ಸಂಪುಟ ವಿಸ್ತರಣೆಯ ಕುರಿತು ಬಿಜೆಪಿ ಶಾಸಕರೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಮ್ಮ ಗುಂಪುಗಾರಿಕೆಯನ್ನು ನಿವಾರಿಸಿಕೊಳ್ಳಲಾಗದೇ ಆ ಗುಂಪುಗಾರಿಕೆಯನ್ನು ಕಾಂಗ್ರೆಸ್ಸಿನವರ ಮೇಲೆ ಹಾಕುತ್ತಿದ್ದಾರೆ ಎಂಧು ಅವರು ದೂರಿದರು.