ಸಂಪುಟ ವಿಸ್ತರಣೆಗೆ ಬಿಎಸ್‌ವೈ ಕಸರತ್ತು

ಬೆಂಗಳೂರು,ನ.೧೧- ರಾಜ್ಯದ ಎರಡು ವಿಧಾನಸಭೆ ಉಪ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರು ಬಹುದಿನಗಳ ನಿರೀಕ್ಷಿತ ಸಂಪುಟ ಪುನಾರಚನೆಗೆ ಮುಂದಾಗಿದ್ದಾರೆ.
ಸಂಪುಟ ಪುನಾರಚನೆಗೆ ಒಪ್ಪಿಗೆ ಪಡೆಯಲು ದೆಹಲಿ ನಾಯಕರ ಕರೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಕಾಯುತ್ತಿದ್ದು, ಯಾವುದೇ ಕ್ಷಣದಲ್ಲಿ ದೆಹಲಿಗೆ ಬರುವಂತೆ ವರಿಷ್ಠರು ಸೂಚನೆ ನೀಡುವ ಸಾಧ್ಯತೆ ಇದೆ. ಹೀಗಾಗಿ ಈ ಎಲ್ಲ ವಿದ್ಯಮಾನ ಅರಿತಿರುವ ಸಚಿವಾಕಾಂಕ್ಷಿ ಶಾಸಕರು ತೀವ್ರ ಲಾಬಿ ನಡೆಸಿದ್ದಾರೆ. ಕೆಲವರು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ವರಿಷ್ಠರ ಕೃಪಾಕಟಾಕ್ಷ ಗಳಿಸಲು ತೀವ್ರ ಯತ್ನ ನಡೆಸಿದ್ದಾರೆ.
ಸಚಿವ ಪಟ್ಟದ ಮೇಲೆ ಕಣ್ಣಿಟ್ಟಿರುವ ಕೆಲ ಶಾಸಕರು ಪಕ್ಷದಲ್ಲಿ ತಾವು ನಂಬಿದ ’ಗಾಡ್ ಫಾದರ್’ಗಳ ಮೂಲಕ ಸಚಿವ ಸ್ಥಾನ ಅಲಂಕರಿಸಲು ಲಾಬಿ ನಡೆಸಿದ್ದಾರೆ.
ದೀಪಾವಳಿಗೂ ಮುನ್ನವೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪುಟ ಪುನಾರಚಿಸಲು ಬಯಸಿದ್ದು, ೩-೪ ಸಚಿವರನ್ನು ಕೈ ಬಿಟ್ಟು ೭-೮ ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಂಡು ಸಂಪುಟ ಪುನಾರಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಉದ್ದೇಶಿಸಿದ್ದು, ಸಂಪುಟ ವಸ್ತರಣೆಯೊ ಪುನಾರಚನೆಯೊ ಎಂಬುದು ವರಿಷ್ಠರ ಜತೆಗಿನ ನಂತರವೇ ತೀರ್ಮಾನವಾಗಲಿದೆ. ಬಿಜೆಪಿ ಸರ್ಕಾರ ರಚನೆಯ ಸಂದರ್ಭದಲ್ಲಿ ನೀಡಿದ್ದ ಮಾತಿನಂತೆ ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಗೆದ್ದಿರುವ ಮುನಿರತ್ನ ವಿಧಾನ ಪರಿಷತ್ ಸದಸ್ಯರಾದ ಎಂ.ಟಿ.ಬಿ ನಾಗರಾಜ್, ಆರ್. ಶಂಕರ್ ಇವರುಗಳಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ನಿಶ್ಚಿತವಾಗಿದೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್.ಶಂಕರ್ ಮತ್ತು ಹೆಚ್. ವಿಶ್ವನಾಥ್ ಈಗಾಗಲೇ ದೆಹಲಿಯಲ್ಲಿದ್ದು, ವರಿಷ್ಠರ ಭೇಟಿಗೆ ಪ್ರಯತ್ನ ನಡೆಸಿದ್ದಾರೆ. ಹೆಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ,
ರಾಜ್ಯ ಸಚಿವ ಸಮಪುಟದಲ್ಲಿ ೭ ಸ್ಥಾನಗಳು ಖಾಲಿ ಇದ್ದು, ವರಿಷ್ಠರು ಒಪ್ಪಿದರೆ ನಾಲ್ಕೈದು ಸಚಿವರನ್ನು ಕೈ ಬಿಟ್ಟು ೮ ಮಂದಿಯನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಒಂದು ವೇಳೆ ವರಿಷ್ಠರು ಪುನಾರಚನೆಗೆ ಒಪ್ಪದಿದ್ದರೆ ಸಂಪುಟ ವಿಸ್ತರಣೆಗಷ್ಟೆ ಸೀಮಿತವಾಗಲಿದ್ದು, ಐವರು ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.
ಬಿಜೆಪಿಯ ಹಿರಿಯ ಶಾಸಕರಾದ ಉಮೇಶ್‌ಕತ್ತಿ, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಎ ರಾಮ್‌ದಾಸ್, ತಿಪ್ಪಾರೆಡ್ಡಿ, ಸಿ.ಪಿ. ಯೋಗೇಶ್ವರ್, ಹಾಲಪ್ಪ ಆಚಾರ್, ನರಸಿಂಹ ನಾಯಕ, ಪ್ರೀತಂಗೌಡ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನಿಲ್ ಕುಮಾರ್, ಎಸ್.ಎಸ್ ಅಂಗಾರ ಸೇರಿದಂತೆ ಹಲವರು ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದು, ಯಾರಿಗೆ ಅದೃಷ್ಟ ಖುಲಾಯಿಸುತ್ತದೊ ಹೇಳಲು ಬಾರದು. ವರಿಷ್ಢರ ಕೃಪಾಕಟಾಕ್ಷ ಇರುವವರು ಸಚಿವ ಸ್ಥಾನ ಅಲಂಕರಿಸಲಿದ್ದಾರೆ. ದೀಪಾವಳಿಗೂ ಮುನ್ನವೇ ಸಚಿವರಾಗುವ ಯೋಗ ಒಲಿದರು ಅಚ್ಚರಿ ಪಡಬೇಕಿಲ್ಲ.