ಸಂಪುಟ ವಿಸ್ತರಣೆಗೆ ಕಸರತ್ತು

ಬೆಂಗಳೂರು, ಮೇ ೨೪- ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಜತೆ ಚರ್ಚಿಸಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಸಂಜೆ ದೆಹಲಿಗೆ ತೆರಳುವರು.
೨ನೇ ಹಂತದಲ್ಲಿ ಸುಮಾರು ೨೦ ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಯಾರನ್ನೆಲ್ಲಾ ಸಚಿವರನ್ನಾಗಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಸಂಜೆ ದೆಹಲಿಗೆ ತೆರಳುವರು.
ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ೮ ಮಂದಿಗೆ ಸಚಿವ ಪಟ್ಟ ಒಲಿದಿದ್ದು, ಎರಡನೇ ಹಂತದಲ್ಲಿ ೨೦ ಮಂದಿಯನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಯಾರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು, ಯಾರಿಗೆ ಯಾವ ಖಾತೆ ನೀಡಬೇಕು. ಈ ಎಲ್ಲ ವಿಚಾರಗಳ ಬಗ್ಗೆ ಈ ಇಬ್ಬರು ನಾಯಕರು ಹೈಕಮಾಂಡ್ ಜತೆ ಇಂದು ಮತ್ತು ನಾಳೆ ಚರ್ಚೆ ನಡೆಸುವರು.
ಸಂಪುಟ ಸೇರ್ಪಡೆಗೆ ಕಾಂಗ್ರೆಸ್‌ನಲ್ಲಿ ಪೈಪೋಟಿಯೇ ಇದ್ದು, ಹಲವು ಹಿರಿಯ ಸಚಿವರು ಸಚಿವ ಪಟ್ಟ ಹಾಗೂ ಪ್ರಬಲ ಖಾತೆಗಾಗಿ ಲಾಬಿ ನಡೆಸಿದ್ದಾರೆ.
ಸಚಿವಕಾಂಕ್ಷಿಗಳ ಸಂಖ್ಯೆ ದೊಡ್ಡದಿರುವುದರಿಂದ ಯಾರನ್ನು ಸಚಿವರನ್ನಾಗಿಸಬೇಕು ಎಂಬುದು ಕಾಂಗ್ರೆಸ್ ನಾಯಕರಿಗೆ ತಲೆನೋವು ತಂದಿದೆ.
ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳಿಗೆ ಅವಕಾಶವಾಗದಂತೆ ಜಾತಿ, ಪ್ರಾದೇಶಿಕವಾರು ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಕಸರತ್ತು ಇಂದು ಮತ್ತು ನಾಳೆ ದೆಹಲಿಯಲ್ಲಿ ನಡೆಯಲಿದೆ.
ಸಚಿವರ ಪಟ್ಟಿ ಬಹುತೇಕ ನಾಳೆ ಸಂಜೆಯೊಳಗೆ ಅಂತಿಮವಾಗಲಿದ್ದು, ಈ ತಿಂಗಳ ೨೭ ಇಲ್ಲವೇ ೨೮ ರಂದು ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುವ ಸಾಧ್ಯತೆಗಳಿವೆ.
ಎರಡನೇ ಹಂತದ ಸಂಪುಟ ವಿಸ್ತರಣೆ ಬಳಿಕವೇ ಎಲ್ಲ ಸಚಿವರಿಗೂ ಖಾತೆ ಹಂಚುವ ತೀರ್ಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿದ್ದು, ಸಂಪುಟ ವಿಸ್ತರಣೆಯ ಚರ್ಚೆಯ ಸಂದರ್ಭದಲ್ಲಿ ಯಾರಿಗೆ ಯಾವ ಖಾತೆ ನೀಡಬೇಕು ಎಂಬುದನ್ನು ವರಿಷ್ಠರ ಜತೆ ಚರ್ಚಿಸಿ ನಿರ್ಧರಿಸುವರು.
ಸಚಿವಾಕಾಂಕ್ಷಿಗಳು ದೆಹಲಿಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆಸಲು ಇಂದು ಸಂಜೆ ದೆಹಲಿಗೆ ತೆರಳುತ್ತಿರುವಾಗಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರುಗಳು ಸಹ ದೆಹಲಿಗೆ ತೆರಳಲಿದ್ದಾರೆ.
ಸುಮಾರು ೨೦ಕ್ಕೂ ಹೆಚ್ಚು ಶಾಸಕರುಗಳು ದೆಹಲಿಗೆ ತೆರಳಲಿದ್ದು, ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪ್ರಭಾವ ಬಳಸಿ ಸಚಿವ ಪಟ್ಟ ಗಿಟ್ಟಿಸಲು ಹರಸಾಹಸ ನಡೆಸಲಿದ್ದಾರೆ.
ಈಗಾಗಲೇ ಕಳೆದ ವಾರ ದೆಹಲಿಗೆ ತೆರಳಿದ್ದ ಸಚಿವಾಕಾಂಕ್ಷಿ ಶಾಸಕರುಗಳು ಮೊದಲ ಹಂತದಲ್ಲಿ ೮ ಸಚಿವರಿಗಷ್ಟೆ ಅವಕಾಶ ನೀಡಿದ ಹೈಕಮಾಂಡ್ ತೀರ್ಮಾನದ ಹಿನ್ನೆಲೆಯಲ್ಲಿ ದೆಹಲಿಯಿಂದ ವಾಪಸ್ಸಾಗಿದ್ದರು. ಈಗ ಇವರೆಲ್ಲ ದೆಹಲಿ ಮಟ್ಟದಲ್ಲಿ ತಮ್ಮ ಗಾಡ್ ಫಾದರ್‌ಗಳ ಮೂಲಕ ಸಚಿವ ಪಟ್ಟ ಗಿಟ್ಟಿಸಲು ಲಾಬಿ ನಡೆಸಿದ್ದಾರೆ.
ನಾಲ್ಕೈದು ಸ್ಥಾನ ಖಾಲಿ
ರಾಜ್ಯ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ೩೪ ಸಚಿವರಿಗೆ ಅವಕಾಶವಿದ್ದು, ನಾಲ್ಕೈದು ಸ್ಥಾನಗಳನ್ನು ಬಿಟ್ಟು ಉಳಿದ ಸ್ಥಾನಗಳಿಗೆ ಸಚಿವರನ್ನು ನೇಮಿಸಲು ಹೈಕಮಾಂಡ್ ನಿರ್ಧರಿಸಿದೆ.
ಎಲ್ಲ ಸಚಿವ ಸ್ಥಾನಗಳನ್ನು ಭರ್ತಿ ಮಾಡಿದರೆ ಸಚಿವ ಸ್ಥಾನ ಸಿಗದವರ ಅಸಮಾಧಾನ ಸ್ಫೋಟವಾಗಬಹುದು ಎಂಬ ಹಿನ್ನೆಲೆಯಲ್ಲಿ ನಾಲ್ಕೈದು ಸ್ಥಾನಗಳನ್ನು ಖಾಲಿ ಇಡುವ ತೀರ್ಮಾನಕ್ಕೆ ಬರಲಾಗಿದೆ.
ಮುಂದೆ ಸಮಯ ನೋಡಿಕೊಂಡು ಈ ನಾಲ್ಕೈದು ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸಂಭಾವ್ಯ ಸಚಿವರ ಪಟ್ಟಿ

  • ಶಿವಾನಂದ ಪಾಟೀಲ್
  • ಲಕ್ಷಣಸವದಿ
  • ಗಣೇಶ್ ಹುಕ್ಕೇರಿ/ಪ್ರಕಾಶ್ ಹುಕ್ಕೇರಿ
  • ಎಸ್.ಎಸ್. ಮಲ್ಲಿಕಾರ್ಜುನ್
  • ಈಶ್ವರಖಂಡ್ರೆ
  • ಕೃಷ್ಣಭೈರೇಗೌಡ
  • ಎಂ. ಕೃಷ್ಣಪ್ಪ
  • ದಿನೇಶ್‌ಗುಂಡೂರಾವ್
  • ತನ್ವೀರ್ ಸೇಠ್
  • ಭೈರತಿ ಸುರೇಶ್
  • ರಾಘವೇಂದ್ರ ಹಿಟ್ನಾಳ್
  • ಟಿ.ಬಿ. ಜಯಚಂದ್ರ
  • ಕೆ.ಎನ್. ರಾಜಣ್ಣ
  • ಹಂಪನಗೌಡ ಬಾದರ್ಲಿ
  • ಸಂತೋಷ್ ಲಾಡ್
  • ಬಿ. ನಾಗೇಂದ್ರ
  • ವಿನಯ್ ಕುಲಕರ್ಣಿ
  • ಬಸವರಾಜ ನೀಲಣ್ಣ ಶಿವಣ್ಣನವರ್
  • ಆರ್.ಬಿ. ತಿಮ್ಮಾಪುರ
  • ಬಿ.ಕೆ. ಸಂಗಮೇಶ್
  • ಮಧು ಬಂಗಾರಪ್ಪ
  • ಚೆಲುವರಾಯಸ್ವಾಮಿ
  • ನರೇಂದ್ರಸ್ವಾಮಿ
  • ಎನ್.ಎ. ಹ್ಯಾರೀಸ್
  • ಲಕ್ಷ್ಮಿಹೆಬ್ಬಾಳ್ಕರ್
  • ಡಾ. ಶರಣ ಪ್ರಕಾಶ್ ಪಾಟೀಲ್