ಸಂಪುಟ ರಚನೆ ಸಂಜೆ ಮುಹೂರ್ತ ನಿಗದಿ


ಬೆಂಗಳೂರು, ಆ. ೨- ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆ ಅಂತಿಮ ರೂಪ ಪಡೆದಿದ್ದು, ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ಇಂದು ಮುಹೂರ್ತ ನಿಗದಿಯಾಗಲಿದೆ.
ಸಂಪುಟ ರಚನೆ ಸಂಬಂಧ ವರಿಷ್ಠರನ್ನು ಭೇಟಿ ಮಾಡಲು ನಿನ್ನೆ ಸಂಜೆಯೇ ದಿಢೀರನೇ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಇಂದು ಸಂಜೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸಿ ಅಂತಿಮಗೊಳಿಸಲಿದ್ದಾರೆ.
ಇಂದು ಸಚಿವ ಸಂಪುಟ ರಚನೆ ಅಂತಿಮಗೊಂಡರೆ ನೂತನ ಸಚಿವರುಗಳ ಪ್ರಮಾಣವಚನ ಒಂದೆರಡು ದಿನಗಳಲ್ಲಿ ನಡೆಯಲಿದೆ.

ಸಂಜೆಗೆ ಅಂತಿಮ
ಸಚಿವ ಸಂಪುಟ ರಚನೆಯ ಮಾತುಕತೆ ಇಂದು ಸಂಜೆ ವೇಳೆಗೆ ಅಂತಿಮವಾಗಲಿದೆ. ಸಚಿವ ಸಂಪುಟದ ಗಾತ್ರ, ಉಪಮುಖ್ಯಮಂತ್ರಿ ಸ್ಥಾನ ಎಲ್ಲವೂ ಅಂತಿಮಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ದೆಹಲಿಯ ಕರ್ನಾಟಕ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಂಜೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಸಭೆ ಇದೆ. ಈ ಸಭೆಯಲ್ಲಿ ಸಂಪುಟ ರಚನೆ ಅಂತಿಮ ರೂಪ ಪಡೆಯಲಿದೆ ಎಂದರು.
ಸಂಪುಟ ರಚನೆಗೆ ಯಾವ ಸೂತ್ರಗಳು ಅನ್ವಯಿಸಬೇಕು, ಎಷ್ಟು ಜನರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು, ಯಾರನ್ನೆಲ್ಲಾ ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಲ್ಲವೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸಭೆಯಲ್ಲೇ ತೀರ್ಮಾನವಾಗಲಿದೆ. ಈ ಸಭೆಯ ಬಳಿಕ ಎಲ್ಲ ಮಾಹಿತಿಗಳು ಲಭ್ಯವಾಗಲಿದೆ ಎಂದರು.
ಎಷ್ಟು ಹಂತದಲ್ಲಿ ಸಂಪುಟ ರಚಿಸಬೇಕು, ಸಂಪುಟದ ಗಾತ್ರ ಎಷ್ಟಿರಬೇಕು ಎಲ್ಲದರ ಬಗ್ಗೆಯೂ ವರಿಷ್ಠರೊಂದಿಗೆ ಚರ್ಚಿಸುತ್ತೇನೆ. ಪ್ರಾದೇಶಿಕವಾರು, ಸಾಮಾಜಿಕ ನ್ಯಾಯ ಈ ಸೂತ್ರಗಳನ್ನು ಇಟ್ಟುಕೊಂಡು ಸಂಪುಟ ರಚನೆ ಅಂತಿಮವಾಗಲಿದೆ ಎಂದು ಅವರು ಹೇಳಿದರು.
ಎಲ್ಲ ಶಾಸಕರನ್ನು ಮಂತ್ರಿ ಮಾಡಲು ಸಾಧ್ಯವಿಲ್ಲ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎಲ್ಲರಿಗೂ ಸಚಿವ ಸ್ಥಾನ ಸಿಗುವುದೂ ಇಲ್ಲ. ಇದು ಶಾಸಕರಿಗೂ ಗೊತ್ತಿದೆ ಎಂದ ಅವರು, ದೆಹಲಿಗೆ ಬಂದಿರುವ ಶಾಸಕರ ಜತೆಯೂ ಚರ್ಚಿಸುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಅವರು ತಿಳಿಸಿದರು.
ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಅಗತ್ಯತೆ ಇದ್ದು ಇದನ್ನು ಗಮನದಲ್ಲಿಟ್ಟುಕೊಂಡು ಒಮ್ಮತದ ತೀರ್ಮಾನ ಆಗಲಿದೆ.
ಇಂದೇ ಸಂಪುಟ ರಚನೆ ಅಂತಿಮಗೊಂಡರೆ ಬುಧವಾರ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ. ಒಂದು ವೇಳೆ ಸಂಪುಟ ರಚನೆ ತೀರ್ಮಾನಗಳು ಇಂದು ಆಗದೆ ನಾಳೆಗೆ ಹೋದರೆ ಪ್ರಮಾಣ ವಚನ ಮುಂದಕ್ಕೆ ಹೋಗಲಿದೆ ಎಂದರು.
ಎಲ್ಲವನ್ನು ಸರಿದೂಗಿಸಿಕೊಂಡು ಸಚಿವ ಸಂಪುಟ ರಚನೆಯಾಗಲಿದೆ ಎಂದು ಅವರು ಹೇಳಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಸತ್‌ನಲ್ಲಿ ಭೇಟಿ ಮಾಡಿ ಚರ್ಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ಪಟ್ಟಿ ಬಹುತೇಕ ಅಂತಿಮ
ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ನೂತನ ಸಚಿವರ ಪಟ್ಟಿಯನ್ನು ತಮ್ಮ ಜತೆ ಕೊಂಡೊಯ್ದಿದ್ದು, ವರಿಷ್ಠರ ಜತೆ ಚರ್ಚಿಸಿ ಪಟ್ಟಿಯನ್ನು ಇಂದು ಸಂಜೆ ಅಂತಿಮಗೊಳಿಸಲಿದ್ದು, ಎರಡು ಹಂತಗಳಲ್ಲಿ ಸಚಿವ ಸಂಪುಟ ರಚನೆಯಾಗಲಿದೆ.
ಮೊದಲ ಹಂತದಲ್ಲಿ ೧೨-೧೫ ಸಚಿವರು ಪ್ರಮಾಣ ವಚನ ಸ್ವೀಕರಿಸಿರುವ. ಜಾತಿ, ಜಿಲ್ಲೆ, ಸಾಮಾಜಿಕ ನ್ಯಾಯ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಸಚಿವರ ಪಟ್ಟಿ ಸಿದ್ಧವಾಗಲಿದೆ.
ಯಾರನ್ನು ಉಪಮುಖ್ಯಮಂತ್ರಿ ಮಾಡಬೇಕು, ಯಾರನ್ನು ಸಂಪುಟದಿಂದ ಕೈಬಿಡಬೇಕು, ಹೊಸದಾಗಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಲ್ಲದರ ಬಗ್ಗೆಯೂ ಸಮಗ್ರ ಚರ್ಚೆ ನಡೆದು, ಎಲ್ಲವನ್ನು ಅಳೆದು ತೂಗಿ ಸಚಿವರ ಪಟ್ಟಿ ಫೈನಲ್ ಆಗಲಿದೆ
ಯಡಿಯೂರಪ್ಪ ಸಂಪುಟದಲ್ಲಿ ನಾಲ್ಕೈದು ಹಿರಿಯ ಸಚಿವರನ್ನು ಕೈಬಿಡಲಿದ್ದು, ವಲಸಿಗ ಸಚಿವರಲ್ಲೂ ೩-೪ ಮಂದಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೊಸದಾಗಿ ೭-೮ ಮಂದಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ.
ತಡವಾದ ಭೇಟಿ
ಹೈಕಮಾಂಡ್ ಬುಲಾವ್ ಮೇರೆಗೆ ನಿನ್ನೆ ಸಂಜೆಯೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಇಂದು ಬೆಳಗ್ಗೆ ೯ ಗಂಟೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲು ಸಮಯ ನಿಗದಿಯಾಗಿತ್ತು ಆದರೆ ಈ ಭೇಟಿ ಬೆಳಗ್ಗೆ ೧೧ ಗಂಟೆಗೆ ಮುಂದಕ್ಕೆ ಹೋಗಿ ಅಂತಿಮವಾಗಿ ಸಂಜೆಗೆ ಇವರಿಬ್ಬರ ಭೇಟಿ ನಿಗದಿಯಾಗಲಿದೆ.
ಸಂಸತ್ ಅಧಿವೇಶನದ ಕಾರಣ ರಾಷ್ಟ್ರೀಯ ಅಧ್ಯಕ್ಷರ ಭೇಟಿ ವಿಳಂಬವಾಯಿ ಎಂದು ಹೇಳಲಾಗಿದೆ.
ನಿನ್ನೆ ರಾತ್ರಿಯೇ ಬಸವರಾಜು ಬೊಮ್ಮಾಯಿ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಅಜ್ಞಾತ ಸ್ಥಳದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದರು.
ದೆಹಲಿಯಲ್ಲಿ ಬೀಡು ಬಿಟ್ಟಿರುವ ಸಚಿವಾಕಾಂಕ್ಷಿ ಶಾಸಕರುಗಳು
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ದೆಹಲಿಗೆ ತೆರಳಿದ ಬೆನ್ನಲ್ಲೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಜನ್‌ಗೂ ಹೆಚ್ಚು ಶಾಸಕರು ದೆಹಲಿಯಲ್ಲೇ ಬೀಡುಬಿಟ್ಟಿದ್ದ ವರಿಷ್ಠರ ಮಟ್ಟದಲ್ಲಿ ತಮಗಿರುವ ಪ್ರಭಾವ ಬಳಸಿ ಸಚಿವ ಸ್ಥಾನ ಗಿಟ್ಟಿಸಲು ಲಾಬಿ ನಡೆಸಿದ್ದಾರೆ.
ಶಾಸಕರುಗಳಾದ ಲಕ್ಷ್ಮಣಸವದಿ, ಸಿ.ಸಿ. ಪಾಟೀಲ, ಅರವಿಂದ ಬೆಲ್ಲದ, ಉಮೇಶ್ ಕತ್ತಿ, ರಾಜೂಗೌಡ, ಸತೀಶ್‌ರೆಡ್ಡಿ ಸೇರಿದಂತೆ ಹಲವು ಸಚಿವರುಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.