ಸಂಪುಟ ಮುಹೂರ್ತ ನಿಗದಿಗೆ ಬಿಎಸ್‌ವೈ ದೆಹಲಿಗೆ ಪಯಣ

ಬೆಂಗಳೂರು, ನ. ೧೮- ಸಚಿವ ಸಂಪುಟ ವಿಸ್ತರಣೆ-ಪುನಾರಚನೆ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪರವರು ವರಿಷ್ಠರು ಕರೆ ಮೇರೆಗೆ ದೆಹಲಿಗೆ ಹೊರಟಿರುವುದು ಕೆಲ ಸಚಿವರು ಹಾಗೂ ಸಚಿವ ಪಟ್ಟದ ಮೇಲೆ ಕಣ್ಣಿಟ್ಟಿರುವ ಶಾಸಕರ ನಿದ್ದೆಗೆಡಿಸಿದೆ.
ಸಚಿವ ಸಂಪುಟ ವಿಸ್ತರಣೆ ಸಂಬಂಧ ವರಿಷ್ಠರ ಬುಲಾವ್ ಮೇರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಧ್ಯಾಹ್ನ ದೆಹಲಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು, ಸಂಜೆ ವರಿಷ್ಠರೊಡನೆ ಚರ್ಚಿಸಲಿದ್ದಾರೆ.
ಮುಖ್ಯಮಂತ್ರಿಗಳ ಈ ದೆಹಲಿ ಭೇಟಿ ಸಚಿವಾಕಾಂಕ್ಷಿ ಶಾಸಕರು ಹಾಗೂ ಸಂಪುಟ ಪುನಾರಚನೆಯಾದರೆ ಕೈ ಬಿಡುವ ಪಟ್ಟಿಯಲ್ಲಿರುವ ಸಚಿವರ ಎದೆಯಲ್ಲಿ ಢವಢವ ಶುರುವಾಗಿದೆ.
ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಚರ್ಚಿಸಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡಲಿದ್ದಾರೆ.
ಸಂಪುಟ ವಿಸ್ತರಿಸಬೇಕೇ, ಇಲ್ಲವೇ ಪುನಾರಚಿಸಬೇಕೇ ಎಂಬ ಬಗ್ಗೆಯೂ ಇಂದು ಸಂಜೆ ವರಿಷ್ಠರೊಂದಿಗೆ ಚರ್ಚಿಸುವ ವೇಳೆ ತೀರ್ಮಾನವಾಗಲಿದೆ.
ಒಂದು ವೇಳೆ ಸಂಪುಟ ಪುನಾರಚನೆಗೆ ವರಿಷ್ಠರು ಒಪ್ಪಿದರೆ ಯಾರನ್ನು ಕೈ ಬಿಡಬೇಕು, ಯಾರನ್ನೂ ಸಂಪುಟಕ್ಕೆ ಹೊಸದಾಗಿ ಸೇರಿಸಿಕೊಳ್ಳಬೇಕು ಎಂಬುದು ಸಂಜೆಯೇ ತೀರ್ಮಾನವಾಗಲಿದೆ.
ಸಿಎಂ ಅಭಯ
ದೆಹಲಿಗೆ ತೆರಳುವ ಮುನ್ನ ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪುಟ ಸಭೆಯಲ್ಲಿ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಸಚಿವರುಗಳೊಂದಿಗೆ ಅನೌಪಚಾರಿಕ ಚರ್ಚೆ ನಡೆಸಿ ಸಂಜೆಯೊಳಗೆ ಎಲ್ಲವೂ ಸ್ಪಷ್ಟವಾಗಲಿದೆ. ಯಾರಿಗೂ ಆತಂಕಬೇಡ ಎಂಬ ಅಭಯ ನೀಡಿದರು.
ವರಿಷ್ಠರ ತೀರ್ಮಾನ
ಸಚಿವ ಸಂಪುಟವನ್ನು ವಿಸ್ತರಿಸಬೇಕೋ, ಪುನಾರಚಿಸಬೇಕೋ ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿ ನಂತರವೇ ಎಲ್ಲವೂ ಅಂತಿಮವಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ವರಿಷ್ಠರ ಭೇಟಿ ಸಂದರ್ಭದಲ್ಲಿ ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು. ವರಿಷ್ಠರ ಸೂಚನೆಯಂತೆ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದರು.
ಮಂತ್ರಿಗಿರಿ ಪಟ್ಟ ಉಳಿಸಿಕೊಳ್ಳಲು ಲಾಬಿ
ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪುಟ ವಿಸ್ತರಣೆ ಸಂಬಂಧ ಇಂದು ದೆಹಲಿಗೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ಹಲವು ಸಚಿವಾಕಾಂಕ್ಷಿ ಶಾಸಕರುಗಳು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದರೆ, ಮತ್ತೊಂದೆಡೆ ಸಂಪುಟ ಪುನಾರಚನೆಯಾದರೆ ಪಟ್ಟ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿರುವ ಸಚಿವರುಗಳು ಸಹ ಯಡಿಯೂರಪ್ಪನವರನ್ನು ಭೇಟಿ ಮಾಡಿದರು.
ಇಂದು ಬೆಳಿಗ್ಗೆಯೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಹಿರಿಯ ಶಾಸಕ ಉಮೇಶ್ ಕತ್ತಿ, ರೇಣುಕಾಚಾರ್ಯ, ಸಿದ್ದು ಸವದಿ ಇವರುಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು.
ಹಾಗೆಯೇ ಸಂಪುಟ ಪುನಾರಚನೆಯಾದರೆ ಮಂತ್ರಿಗಿರಿ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿರುವ ಸಿ.ಸಿ. ಪಾಟೀಲ್ ಸಹ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಈ ನಡುವೆ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣಸವದಿ, ಗೋವಿಂದ ಕಾರಜೋಳ, ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ. ಪಾಟೀಲ್ ಸಹ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿಗಳು ಇಂದು ಸಂಜೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲಿರುವ ಹಿನ್ನೆಲೆಯಲ್ಲಿ ಸಚಿವರು ಹಾಗೂ ಶಾಸಕರುಗಳ ಈ ಭೇಟಿ ಮಹತ್ವ ಪಡೆದುಕೊಂಡಿದೆ.