
ಕಲಬುರಗಿ,ಮೇ.19: ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಸಚಿವ ಸ್ಥಾನ ಸಿಕ್ಕಿದೆ. ಆದಾಗ್ಯೂ, ಇಲ್ಲಿಯವರೆಗೂ ಆಳಂದ್ ತಾಲ್ಲೂಕಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿಲ್ಲ. ಆದ್ದರಿಂದ ಕಳೆದ ನಾಲ್ಕು ದಶಕಗಳಿಂದ ನಿರಂತರ ಹೋರಾಟದ ಮೂಲಕ ರಾಜಕಾರಣ ಮಾಡಿಕೊಂಡು ಬಂದಿರುವ ಆಳಂದ್ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ್ ಅವರಿಗೆ ನೂತನ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಸ್ಥಾನ ಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ ಆರ್. ಥಂಭೆ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಪರ, ಮಹಿಳಾ ಪರ, ದಲಿತ ಪರ, ಕಾರ್ಮಿಕರ ಪರ ಹೋರಾಟ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಸಿಕ್ಕಂತಹ ಕಡಿಮೆ ಅವಧಿಯಲ್ಲಿ ಶಾಶ್ವತ ಕಾಮಗಾರಿ ಮಾಡಿದ್ದಾರೆ. ಪಾರದರ್ಶಕ ಆಡಳಿತ ನೀಡುವುದರ ಜೊತೆಗೆ ಸರ್ವ ಧರ್ಮಿಯರಿಗೆ ಸಮಾನ ಅವಕಾಶ ಕಲ್ಪಿಸಿದ್ದಾರೆ. ಹಿಂದೂ- ಮುಸ್ಲಿಂ ಭಾವೈಕ್ಯತೆ ಬೆಸೆಯುವುದರ ಜೊತೆಗೆ ಧರ್ಮ ನಿರಪೇಕ್ಷ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದರು.
ಬಸವಣ್ಣ, ಅಂಬೇಡ್ಕರ್, ಮಹಾತ್ಮಾಗಾಂಧಿ, ಜಯಪ್ರಕಾಶ್ ನಾರಾಯಣ್, ರಾಮ್ ಮನೋಹರ್ ಲೋಹಿಯಾ, ನಾರಾಯಣ್ ಗುರು, ಪೆರಿಯಾರ್ ರಾಮಸ್ವಾಮಿ, ಕನಕದಾಸ್ ಮುಂತಾದ ದಾರ್ಶನಿಕರ ಆದರ್ಶ ಅಳವಡಿಸಿಕೊಂಡು ಸಮಾಜ ಸೇವೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಶಿರಪುರ ಮಾದರಿಯಲ್ಲಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಅಂತರ್ ಜಲ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿಕ್ಷಣ, ಆರೋಗ್ಯ, ಉದ್ಯೋಗ, ಸಖಸ್ಕøತಿ, ನೀರಾವರಿ, ಸಾರಿಗೆ ಮುಂತಾದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಲಿಂಗಾಯತ ಸಮಾಜದ ಹಿರಿಯ ಮುತ್ಸದ್ದಿ ರಾಜಕಾರಣಿಗಳಾಗಿದ್ದಾರೆ. ಆಳಂದ್ ವಿಧಾನಸಭಾ ಕ್ಷೇತ್ರ ಗಡಿ ಪ್ರದೇಶವಾಗಿದೆ. ಆ ಕ್ಷೇತ್ರದಿಂದ ಇಲ್ಲಿಯವರೆಗೆ ಯಾರೂ ಸಚಿವರಾಗಿಲ್ಲ. ಬಿ.ಆರ್. ಪಾಟೀಲ್ ಅವರು ಕೊನೆಯ ಅವಧಿಯೆಂದು ಘೋಷಿಸಿಕೊಂಡಿದ್ದಾರೆ. ಆದ್ದರಿಂದ ಅವರ ಸೇವೆಯನ್ನು ಖಂಡಿತ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಒಂದು ವೇಳೆ ಸಚಿವ ಸ್ಥಾನ ಕೊಡದೇ ಹೋದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿರುವ ಅವರು, ಜಿಲ್ಲೆಯಲ್ಲಿ ಬರುವ ಎಲ್ಲ ತಾಲ್ಲೂಕುಗಳ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಆಳಂದ್ ತಾಲ್ಲೂಕಿಗೆ ಮಾತ್ರ ಸಚಿವ ಸ್ಥಾನ ನೀಡಿಲ್ಲ. ಆದ್ದರಿಂದ ಬಿ.ಆರ್. ಪಾಟೀಲ್ ಅವರಿಗೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರಮೇಶ್ ರಾಗಿ, ಸುನೀಲಗೌಡ ಪಾಟೀಲ್ ಕಣಮಸ್, ವಿಜಯಕುಮಾರ್ ಹತ್ತರಕಿ ಬಸವರಾಜ್ ಆಟೊರೆ, ಸಿದ್ದು ವೇದಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.