ಸಂಪರ್ಕ ರಸ್ತೆ ಕೂಡಿಸಲು ಆಗ್ರಹಿಸಿ ಧರಣಿ

ನರೇಗಲ್ಲ,ಜ19: ನರೇಗಲ್ಲ ಮೂಲಕ ಹಾದು ಹೋಗುವ ಪುಣೆ-ಬೆಂಗಳುರು ಹೆದ್ದಾರಿಗೆ ನರೇಗಲ್ಲದ ಸಂಪರ್ಕ ರಸ್ತೆಯನ್ನು ಕೂಡಿಸಬೇಕು ಎಂದು ಆಗ್ರಹಿಸಿ ನರೇಗಲ್ಲದ ರೈತ ಸೇನಾದವರು ಪ್ರತಿಭಟನೆ ನಡೆಸಿ, ಕೆಲಕಾಲ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.
ಪಟ್ಟಣದ ದುರ್ಗಾ ವೃತ್ತದಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನುದ್ದೇಶಿಸಿ ಯುವ ಧುರೀಣ ಆನಂದ ಕೊಟಗಿ ಮಾತನಾಡಿದರು. ನರೇಗಲ್ಲ ಪಟ್ಟಣವನ್ನು ದೌರ್ಭಾಗ್ಯಗಳ ಊರು ಎಂದೇ ಕರೆಯಲಾಗುತ್ತಿದೆ. ಇಲ್ಲಿಗೆ ಬರಬೇಕಿದ್ದ ಗದಗ-ವಾಡಿ ರೈಲು ಬೇರೆಯವರ ಪಾಲಾಯಿತು. ಇನ್ನೂ ಅನೇಕ ಮಹತ್ತರ ಯೋಜನೆಗಳು ನರೇಗಲ್ಲದಿಂದ ತಪ್ಪಿಸಿಕೊಂಡು ಹೋಗಿವೆ. ಈಗ ಈ ಸಂಪರ್ಕ ರಸ್ತೆಯೂ ಸಹ ಕಣ್ಮರೆಯಾಗುವ ಸೂಚನೆಗಳು ಕಂಡು ಬಂದಿದ್ದರಿಂದ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಟಗಿ ಹೇಳಿದರು.
ಬಿಜೆಪಿ ಯುವ ಧುರೀಣ ರವಿ ದಂಡಿನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಸಂಪರ್ಕ ರಸ್ತೆ ಆಗುವುದರಿಂದ ನರೇಗಲ್ಲ ಪಟ್ಟಣದ ರೈತರಿಗೆ, ವ್ಯಾಪಾರಸ್ಥರಿಗೆ, ಇನ್ನಿತರ ಉದ್ಯೋಗಿಗಳಿಗೆ ತುಂಬಾ ಅನುಕೂಲವಾಗುತ್ತದೆ. ಹೊಸ ಹೆದ್ದಾರಿಯು ನರೇಗಲ್ಲದಿಂದ ಬಹಳ ದೂರವೇನೂ ಹಾದು ಹೋಗುವುದಿಲ್ಲ. ಅನೇಕ ಸ್ವಯಂ ಉದ್ಯೋಗಿಗಳು ಈ ಕೂಡು ರಸ್ತೆಯಿಂದ ಹೊಸ ಉದ್ಯೋಗಗಳನ್ನು ಕಂಡುಕೊಳ್ಳುತ್ತಾರೆ. ಆದ್ದರಿಂದ ಸಂಬಂಧಿಸಿದವರು ಈ ಕೂಡು ರಸ್ತೆಯನ್ನು ನರೇಗಲ್ಲ ಪಟ್ಟಣದ ಜನತೆಗೆ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಶರಣಪ್ಪ ಧರ್ಮಾಯತ, ಕೃಷ್ಣಾ ಶಾಸ್ತ್ರಿ, ಕಳಕಪ್ಪ ರೋಣದ, ಶಿವನಗೌಡ ಮದ್ನೂರ,ಉಮೇಶಗೌಡ ಪಾಟೀಲ,ಪ್ರಕಾಶ ಹತ್ತಿಕಟಗಿ,ನರೇಶ ಜೋಳದ, ಮಂಜುನಾಥ ಧರ್ಮಾಯತ, ಬಸವರಾಜ ಸೋಮಗೊಂಡ, ಬಸನಗೌಡ ಹಿರೇವಡೆಯರ ಇನ್ನೂ ಮುಂತಾದವರು ಮಾತನಾಡಿದರು. ದುರ್ಗಾ ವೃತ್ತದಲ್ಲಿ ಅರ್ಧ ತಾಸು ರಸ್ತೆ ತಡೆಯನ್ನು ನಡೆಸಲಾಯಿತು.
ಜಿಲ್ಲಾಧಿಕಾರಿಗಳ ಪರವಾಗಿ ಗಜೇಂದ್ರಗಡ ತಹಶಿಲ್ದಾರ ರಜನಿಕಾಂತ ಕೆಂಗೇರಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಅವರೊಂದಿಗೆ ರವೀಂದ್ರನಾಥ ಪಾಟೀಲ ಮತ್ತು ವಿಜಯಲಕ್ಷ್ಮಿ ವಸ್ತ್ರದ, ಚಂದ್ರು ಹೊನವಾಡ ಸೇರಿದಂತೆ ಪ್ರತಿಭಟನಾ ಸಂದರ್ಭದಲ್ಲಿ ರೈತ ಸೇನಾದ ನೂರಾರು ಯುವಕರು ಪಾಲ್ಗೊಂಡಿದ್ದರು.